ಚಿತ್ರದುರ್ಗ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಕೊಲೆಗೈದು ತಲೆ ಮರೆಸಿಕೊಂಡಿದ್ದ ಇಬ್ಬರು ಕೊಲೆಗಾರರನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಿರ್ಮಾಣ ಹಂತದಲಿದ್ದ ಕನಕಭವನದಲ್ಲಿ ಜುಲೈ 7 ರಂದು ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಬಗ್ಗೆ ಚಳ್ಳಕೆರೆ ಪೊಲೀಸರು ದೂರು ದಾಖಲು ಮಾಡಿಕೊಂಡು, ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದರು. ಈ ವೇಳೆ ಆಂಜನೇಯ (34) ಎಂಬ ವ್ಯಕ್ತಿ ಬರ್ಬರವಾಗಿ ಕೊಲೆಯಾಗಿದ್ದು, ಗುರುತಿಸಲಾಗದಂತೆ ಮುಖವನ್ನು ಜಖಂಗೊಳಿಸಿದ್ದರು.
ಕೊಲೆಯಾದ ಯುವಕ ಆಂಜನೇಯನು ಹಮಾಲಿ ಕೆಲಸ ಮಾಡುತಿದ್ದು, ಗಾಂಧಿನಗರದ ವಾಸಿ ಮಂಜುನಾಥ್ ಹಾಗೂ ಆಟೋ ಡ್ರೈವರ್ ಆಗಿರುವ ಸೋಮಗುದ್ದು ರಸ್ತೆಯ ಗಿರಿ ಎಂಬ ಮೂವರು ಒಟ್ಟಾಗಿ ಸುತ್ತಾಡಿ, ಜುಲೈ 7ರಂದು ಮದ್ಯಪಾನ ಸೇವಿಸಿದ್ದಾರೆ. ಈ ನಡುವೆ ಮಂಜುನಾಥ್ ಹಾಗೂ ಆಂಜನೇಯ ಇಬ್ಬರ ನಡುವೆ ಯಾವುದೋ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಆಂಜನೇಯ ಅವಾಚ್ಯ ಶಬ್ದದಿಂದ ತೆಗಳಿದ ಎಂಬ ಉದ್ದೇಶಕ್ಕಾಗಿ ಮಂಜುನಾಥ್ ಮತ್ತು ಗಿರಿ ಇಬ್ಬರು ಸೇರಿ ಆಂಜನೇಯನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಹೀಗಾಗಿ ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳಾದ ಮಂಜುನಾಥ್ ಹಾಗೂ ಗಿರಿ ಎಂಬವರನ್ನು ಚಳ್ಳಕೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಧಿಕಾ ಜಿ. ತಿಳಿಸಿದರು. ಇದನ್ನೂ ಓದಿ: ಡಿನ್ನರ್ ಮೀಟಿಂಗ್ ಪಾಲಿಟಿಕ್ಸ್ ನಡುವೆ ಡಿಕೆಶಿ ರಿವೆಂಜ್ ಪಾಲಿಟಿಕ್ಸ್
ಮೃತ ಆಂಜನೇಯನ ಜೊತೆಗಾರರಾದ ಮಂಜುನಾಥ್ ಎಂಬವನು ಕೋಳಿಗಳನ್ನು ಕಳ್ಳತನ ಮಾಡುತ್ತಿದ್ದು, ಬೇರೊಂದು ಪ್ರಕರಣದಲ್ಲಿ ಚಿತ್ರದುರ್ಗ ಜೈಲಿನಲ್ಲಿದ್ದಾಗ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನು ಎಂದು ತಿಳಿಸಿದ್ದಾರೆ. ಆದರೆ ಗಿರಿ ಎನ್ನುವವನು ಕುಡಿದ ಅಮಲಿನಲ್ಲಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಕೊಲೆಗಾರರಾಗಿ ಕಂಬಿ ಎಣಿಸುವಂತಾಗಿದೆ.