– ದಂಪತಿಯ ಮಾನವೀಯ ಕಾರ್ಯಕ್ಕೆ ಶ್ಲಾಘನೆ
ತಿಸ್ಸೂರ್(ಕೇರಳ): ತಾಯಿ ಹಾಗೂ ತನ್ನ ಮಲತಂದೆಯಿಂದ ಪ್ರತಿನಿತ್ಯ ಚಿತ್ರಹಿಂಸೆ ಅನುಭವಿಸುತ್ತಿದ್ದ ಯುವತಿಯನ್ನು ದಂಪತಿ ದತ್ತು ಪಡೆದು ಆಕೆಯನ್ನು ಮದುಎವ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು. ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವ ತಂದೆ-ತಾಯಿಯನ್ನು ಪಡೆದುಕೊಂಡ ಸೂರ್ಯಪ್ರಭಾ(18) ಇದೀಗ ಜೀವನದುದ್ದಕ್ಕೂ ಜೊತೆಯಾಗಿ ನಿಲ್ಲುವ ಒಳ್ಳೆಯ ಹುಡುಗನನ್ನು ಬಾಳ ಸಂಗಾತಿಯಾಗಿ ಪಡೆದಿದ್ದಾರೆ. ಈ ಮೂಲಕ ಆಕೆಯ ಜೀವನವೇ ಸಂಪೂರ್ಣ ಬದಲಾಗಿದೆ.
Advertisement
Advertisement
ಮೂಲತಃ ಕೊಂಡಾಜಿ ನಿವಾಸಿಯಾಗಿರುವ ಸೂರ್ಯಪ್ರಭಾ ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದಳು. ಬಳಿಕ ತಾಯಿ ಮತ್ತು ಮಲತಂದೆಯ ಜೊತೆ ವಾಸಿಸುತ್ತಿದ್ದಳು. ಆದರೆ ಈ ದಂಪತಿ ಸೂರ್ಯಪ್ರಭಾಗೆ ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದರು. ಇದರಿಂದ ಸೂರ್ಯಪ್ರಭಾ ಕೂಡ ಬೇಸತ್ತಿದ್ದಳು.
Advertisement
ಸೂರ್ಯಪ್ರಭಾಳ ಕಷ್ಟ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂತೆಯೇ ಪೊಲೀಸರು ಮಲತಂದೆಯನ್ನು ವಶಕ್ಕೆ ಪಡೆದಿದ್ದರು. ಸೂರ್ಯಪ್ರಭಾಳನ್ನು ಕೂಡ ಜೊತೆಯಲ್ಲಿಯೇ ಠಾಣೆಗೆ ಕರೆತಂದಿದ್ದರು. ಈ ವೇಳೆ ದಿನ ನಿತ್ಯವು ನರಕ ಅನುಭವಿಸುತ್ತಿದ್ದ ಸೂರ್ಯಪ್ರಭಾ ಮತ್ತೆ ಮನೆಗೆ ಹೋಗಲು ಪೊಲೀಸರ ಮುಂದೆ ನಿರಾಕರಿಸಿದಳು.
Advertisement
ಪಜಯನ್ನೂನಲ್ಲಿರುವ ಶಿವದಾಸನ್ ದಂಪತಿಯ ವ್ಹೀಲರ್ ಶಾಪ್‍ನಲ್ಲಿ ಸೂರ್ಯಪ್ರಭಾ ಕೆಲ ದಿನಗಳವರೆಗೆ ಕೆಲಸ ಮಾಡಿದ್ದಳು. ಆಗ ನಿಶಾ ಅವರು ಸೂರ್ಯಪ್ರಭಾಳನ್ನು ಮಗಳಂತೆ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಆಕೆಯ ಎಲ್ಲ ವಿಷಯ ತಿಳಿದ ಬಳಿಕ ದಂಪತಿ ಪೊಲೀಸ್ ಅಧಿಕಾರಿಗಳ ಮುಂದೆ ಮನವಿ ಮಾಡಿಕೊಂಡರು. ಹಾಗೆಯೇ ಸೂರ್ಯಪ್ರಭಾಳನ್ನು ದತ್ತು ಪಡೆದು ತಮ್ಮೊಂದಿಗೆ ಕರೆದೊಯ್ದರು.
ಇನ್ನು ಸೂರ್ಯಪ್ರಭಾಳ ಬಗ್ಗೆ ತಿಳಿದ ತಿರುವಿಲ್ವಮಲಾ ನಿವಾಸಿ ಮನೋಜ್ ಆಕೆಯನ್ನು ಮದುವೆಯಾಗಲು ಮುಂದೆ ಬಂದಿದ್ದಾನೆ. ಇದನ್ನು ತಿಳಿದ ಶಿವದಾಸನ್ ದಂಪತಿ ಮದುವೆ ಸಿದ್ಧತೆ ಮಾಡಿ, ಮದುವೆ ಮಾಡಿಕೊಟ್ಟಿದ್ದಾರೆ. ಕೊಡತೂರ್ ಭಗವತಿ ದೇವಸ್ಥಾನದಲ್ಲಿ ಮದುವೆ ಸಮಾರಂಭ ನಡೆದಿದ್ದು, ಕಾರ್ಪೆಂಟರ್ ಆಗಿರುವ ಶಿವದಾಸನ್ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಸೂರ್ಯಪ್ರಭಾಳಿಗೆ ಆಭರಣಗಳನ್ನು ಮಾಡಿಸಿಕೊಟ್ಟಿದ್ದಾರೆ.
ಒಟ್ಟಿನಲ್ಲಿ ಮಾನವೀಯತೆ ಎಂಬುದೇ ಮರೆಯಾಗುತ್ತಿರುವ ಈ ಕಾಲದಲ್ಲಿ ಶಿವದಾಸನ್ ದಂಪತಿ ಮತ್ತು ಮನೋಜ್ ಸೂರ್ಯಪ್ರಭಾಳ ಬಾಳಿನಲ್ಲಿ ಹೊಸ ಬೆಳಕು ತಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.