ರಾಯಚೂರು: ಇತ್ತೀಚೆಗೆ ಹೆಚ್ಚು ಓದಿದವರು, ದೊಡ್ಡ ಕೆಲಸದಲ್ಲಿದ್ದರೂ ಬಿಟ್ಟು ಕೃಷಿ ಕಡೆ ಮುಖ ಮಾಡುತ್ತಿರುವುದು ತಿಳಿದೇ ಇದೆ. ಅದೇ ರೀತಿ ಜಿಲ್ಲೆಯ ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದ ಈ ಯುವತಿ ಓದುತ್ತಾ ಕಳೆದ ಒಂದು ವರ್ಷದಿಂದ ಕೃಷಿ ಮಾಡುತ್ತಿದ್ದಾಳೆ. ಇಡೀ ಕುಟುಂಬದ ಜವಾಬ್ದಾರಿ ಹೊತ್ತು, ನಾನು ರೈತನ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಂಡು ಕೃಷಿಯಲ್ಲಿ ತೊಡಗಿದ್ದಾಳೆ.
ಯುವತಿ ಹುಲಿಗೆಮ್ಮ ಟ್ರ್ಯಾಕ್ಟರ್ ಏರಿ ಹೊಲವನ್ನು ಹದ ಮಾಡುವುದರಿಂದ ಹಿಡಿದು ಕೃಷಿಯ ಪ್ರತಿ ಕೆಲಸವನ್ನೂ ಮಾಡಬಲ್ಲಳು. ಹುಲಿಗೆಮ್ಮ ಪದವಿ ಮೊದಲ ವರ್ಷ ಮುಗಿಸಿ ಈಗ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಆದರೆ ತಂದೆ ಅನಾರೋಗ್ಯದಿಂದಾಗಿ ಸಾವಿಗೀಡಾಗಿದ್ದರಿಂದ ಅಣ್ಣನ ಜೊತೆ ಕುಟುಂಬ ನಿರ್ವಹಣೆಗಾಗಿ ತಾನೇ ಜವಾಬ್ದಾರಿ ತೆಗೆದುಕೊಂಡು ಜಮೀನಲ್ಲಿ ವ್ಯವಸಾಯ ಮಾಡುವುದಕ್ಕೆ ಮುಂದಾಗಿದ್ದಾಳೆ.
ನಿತ್ಯ ಹೊಲದಲ್ಲಿ ಕಳೆ ಕಿಳುವುದು, ಟ್ರಾಕ್ಟರ್ ನಿಂದ ಟಿಲ್ಲರ್, ಕುಂಟೆ ಹೊಡೆಯುವುದು, ಬಿತ್ತನೆ ಮಾಡುವುದು, ಕಸ ತೆಗೆಯುವುದು, ಗೊಬ್ಬರ ಹಾಕುವುದು ಹಾಗೂ ಬೈಕ್ ಓಡಿಸುತ್ತಾ ಕೃಷಿ ಚಟುವಟಿಕೆ ಮಾಡುತ್ತಿದ್ದಾಳೆ. ಸ್ವಂತ ಮೂರು ಎಕರೆ ಜಮೀನಿನ ಜೊತೆಗೆ 15 ಎಕರೆ ಗುತ್ತಿಗೆ ಪಡೆದುಕೊಂಡು ಜಮೀನನಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾಳೆ.
ಎರಡು ವರ್ಷಗಳ ಹಿಂದೆ ಯುವತಿಯ ತಂದೆ ಪಾರ್ಶ್ವವಾಯುಗೆ ಗುರಿಯಾದರು. ಆಗ ಹಲವು ಕಡೆ ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಂದೆ ಸಾವಿಗೀಡಾದರು. ಇದರಿಂದಾಗಿ ಇಡೀ ಕುಟುಂಬ ಹಲವು ಸಮಸ್ಯೆಗಳಿಗೆ ಎದುರಿಸಬೇಕಾಯಿತು. ಮನೆಯ ಕಿರಿಯ ಮಗಳಾದ ಹುಲಿಗೆಮ್ಮ ಎದೆಗುಂದದೆ ತಾನೇ ಕೃಷಿ ಮಾಡುವ ಮೂಲಕ ಇಡೀ ಕುಟುಂಬಕ್ಕೆ ಆಧಾರಸ್ಥಂಭವಾಗಿ ನಿಂತುಕೊಂಡಿದ್ದಾಳೆ. ಅಣ್ಣ ಕೃಷಿ ಕೆಲಸದಲ್ಲಿ ತೊಡಗಿದ್ದರೆ, ಅಕ್ಕ ರಾಯಚೂರು ಕೃಷಿ ವಿವಿಯಲ್ಲಿ ಬಿಟೆಕ್ ಅಗ್ರಿ ಓದುತ್ತಿದ್ದಾಳೆ. ಹುಲಿಗೆಮ್ಮಳ ಧೈರ್ಯದಿಂದಲೇ ನಾನು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿದೆ ಎಂದು ಹುಲಿಗೆಮ್ಮಳ ಅಕ್ಕ ಈರಮ್ಮ ತಂಗಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಮಗಳು ನಮಗೆ ಆಶ್ರಯವಾಗಿದ್ದಾಳೆ ಆದರೆ ಸರ್ಕಾರದ ಸಾಲಮನ್ನಾ ಮಾತ್ರ ನಮಗೆ ಆಗಲಿಲ್ಲ ಎಂದು ಹುಲಿಗೆಮ್ಮಳ ತಾಯಿ ಯಲ್ಲಮ್ಮ ದುಃಖ ತೋಡಿಕೊಂಡಿದ್ದಾರೆ. ಆದರೆ ಹುಲಿಗೆಮ್ಮ ಓದಬೇಕಾದ ವಯಸ್ಸಿನಲ್ಲಿ ಇಡೀ ಸಂಸಾರದ ಜವಾಬ್ದಾರಿ ಹೊತ್ತು ಅಕ್ಕನನ್ನ ಓದಿಸುತ್ತಿರುವ ಯುವತಿ ಹುಲಿಗೆಮ್ಮ ಈಗಿನ ಇಡೀ ಯುವ ಸಮುದಾಯಕ್ಕೆ ಮಾದರಿ. ಕೃಷಿ ಜೊತೆ ವಿದ್ಯಾಭ್ಯಾಸವನ್ನೂ ಮುಂದುವರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.