ಗದಗ: ಕೋವಿಡ್ 3ನೇ ಅಲೆ ಭೀಕರ ಪ್ರಭಾವ ಬೀರುವ ಸಂಭವವಿದೆ. ಕಟ್ಟಡ ಹಾಗೂ ಇತರೆ ಕಾರ್ಮಿಕರು ತಮ್ಮ ಕುಟುಂಬಕ್ಕೆ ತಾವೇ ಆಧಾರ ಸ್ತಂಭವಾಗಿದ್ದು, ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬ ಕಾರ್ಮಿಕ ಲಸಿಕೆ ಪಡೆದುಕೊಳ್ಳಬೇಕು ಎಂದು ರಾಜ್ಯ ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್-19 ಸಂಕಷ್ಟದಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಧಾನ್ಯ ಹಾಗೂ ಸುರಕ್ಷಾ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು. ಕೋವಿಡ್ ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿರುವುದಿಲ್ಲ, ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಕಟ್ಟಡ, ಇತರೆ ಹಾಗೂ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕೋವಿಡ್-19 ಸಂದಿಗ್ದ ಪರಿಸ್ಥಿತಿಯಿಲ್ಲಿ ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಮೂರು ಸಾವಿರ ರೂ.ಗಳ ಸಹಾಯ ಧನ ಒದಗಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿದ ಕಾರ್ಮಿಕರು ಪ್ರತಿವರ್ಷ ತಮ್ಮ ನೋಂದಣಿಯನ್ನು ನವೀಕರಿಸಿಕೊಳ್ಳಬೇಕು. ನೋಂದಾಯಿಸಿದ ಕಾರ್ಮಿಕರಿಗೆ ಕಿಟ್‍ಗಳ ಕೊರತೆ ಬಿದ್ದಲ್ಲಿ ಪೂರೈಸಲು ಅಗತ್ಯದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಶಾಸಕ ಎಚ್.ಕೆ.ಪಾಟೀಲ್ ಮಾತನಾಡಿ, ಕೋವಿಡ್ 2ನೇ ಅಲೆ ಪ್ರತಿಯೊಬ್ಬರನ್ನು ಆರೋಗ್ಯ ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದೆ. ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ಒದಗಿಸುತ್ತಿರುವದು ಅನುಕೂಲಕರವಾಗಿದೆ. ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ 16,500 ನೋಂದಾಯಿತ ಕಾರ್ಮಿಕರು, ಅಸಂಘಟಿತ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಶ್ರಮ ಜೀವಿಗಳಿದ್ದು, ಎಲ್ಲರಿಗೂ ಆಹಾರ ಕಿಟ್‍ಗಳನ್ನು ಒದಗಿಸಬೇಕು. ಕಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಪ್ರತಿಯೊಬ್ಬ ಕಾರ್ಮಿಕರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗುವಂತೆ ನಿಗಾವಹಿಸಲು ಸೂಚಿಸಿದರು.
ಗದಗ ತಹಶೀಲ್ದಾರ ಕಿಷನ್ ಕಲಾಲ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಜಿ.ವಿಶ್ವನಾಥ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಸುಧಾ.ಚಿ.ಗರಗ, ಹಿರಿಯ ಕಾರ್ಮಿಕ ನೀರಿಕ್ಷ ಅಕ್ರಮ ಅಲ್ಲಾಪುರ, ವಿವಿಧ ಕಾರ್ಮಿಕ ಸಂಘಟನೆ ಮುಖಂಡರು, ನೋಂದಾಯಿತ ಕಟ್ಟಡ ಮತ್ತು ಇತರೆ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.