ಕುಕ್ಕೆಯಲ್ಲಿ ಚಂಪಾ ಷಷ್ಠಿ ಸಂಪನ್ನ- ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದ ಭಕ್ತ ಸಮೂಹ

Public TV
2 Min Read
kukke subrahmanya champashashthi

ಮಂಗಳೂರು: ಪರುಶುರಾಮ ಸೃಷ್ಟಿಯ ಸಪ್ತ ಮಹಾ ಕ್ಷೇತ್ರಗಳಲ್ಲಿ ಒಂದಾಗಿರೋ ದೇಶದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಅದರಲ್ಲೂ ಚಂಪಾ ಷಷ್ಠಿ ಉತ್ಸವಕ್ಕೆ ಹೆಚ್ಚಿನ ವಿಶೇಷತೆಯಿದೆ. ಕಾರ್ತಿಕ ಬಹುಳ ದ್ವಾದಶಿಯಿಂದ ಆರಂಭಗೊಂಡು ಮಾರ್ಗಶಿರ ಶುದ್ಧ ಪೌರ್ಣಮಿಯವರೆಗೆ ಕುಕ್ಕೆ ಕ್ಷೇತ್ರದಲ್ಲಿ ಅತ್ಯಂತ ಸಂಭ್ರಮದ ಉತ್ಸವ ನಡೆಯುತ್ತೆ. ಈ ಬಾರಿಯೂ ಕುಕ್ಕೆಯಲ್ಲಿ ಸಂಭ್ರಮದ ಚಂಪಾ ಷಷ್ಠಿ ಆಚರಣೆ ನಡೆದಿದ್ದು, ಇಂದು ಬೆಳಿಗ್ಗೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ ನಡೆಸುವ ಮೂಲಕ ಚಂಪಾ ಷಷ್ಠಿ ಸಂಪನ್ನಗೊಂಡಿದೆ.

WhatsApp Image 2020 12 20 at 8.55.07 PM

ಮಾರ್ಗಶಿರ ಶುದ್ಧ ಷಷ್ಠಿಯನ್ನ ಚಂಪಾ ಷಷ್ಠಿ ಎಂದು ಕರೆಯಲಾಗುತ್ತೆ. ಈ ದಿನ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಹೀಗಾಗಿ ಇಂದು ಉಮಾಮಹೇಶ್ವರ ದೇವರು ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕ್ಕಿಯಲ್ಲಿ ಬಂದು ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಮತ್ತು ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾದರು. ನಂತರ ಎರಡು ರಥಗಳನ್ನ ಎಳೆಯೋ ಮೂಲಕ ಕ್ಷೇತ್ರದಲ್ಲಿನ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಅತ್ಯಂತ ಸಂಭ್ರಮದಿಂದ ನಡೆದಿದೆ.

WhatsApp Image 2020 12 20 at 8.55.08 PM 1

ಮೊದಲಿಗೆ ಪಂಚಮಿ ರಥವನ್ನ ಎಳೆಯಲಾಯಿತು. ನಂತರ ಬ್ರಹ್ಮರಥವನ್ನು ಎಳೆಯಲಾಯಿತು. ಈ ವೇಳೆ ಭಕ್ತಾಧಿಕಾರಿ ತಮ್ಮ ಹರಕೆಯಂತೆ ಕಾಫೀ ಬೀಜ, ಕಾಳಮೆಣಸು, ಹಣ, ಮತ್ತು ಏಲಕ್ಕಿಯನ್ನ ರಥಕ್ಕೆ ಎಸೆದು ಕೃತಾರ್ಥರಾದರು. ಅಲ್ಲದೆ ಅನೇಕ ಮಂದಿ ರಥವನ್ನ ಎಳೆದು ಧನ್ಯರಾದರು. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ ಯಾವುದೇ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ನಡೀತು.

ಊರು-ಪರವೂರಿಗಳಿಂದ ಬಂದ ಅಪಾರ ಪ್ರಮಾಣದ ಭಕ್ತರು ಸುಬ್ರಹ್ಮಣ್ಯನ ಭವ್ಯ ರಥೋತ್ಸವವನ್ನ ಕಣ್ತುಂಬಿಕೊಂಡು ಧನ್ಯರಾದರು. ಇನ್ನು ಕುಕ್ಕೆಯ ಜಾತ್ರಾ ಸಂಭ್ರಮಕ್ಕೆ ಅದರದ್ದೇ ಆದ ವಿಶೇಷತೆಯಿದೆ. ಅದರಲ್ಲೂ ಇಲ್ಲಿ ದೇವರನ್ನ ತಲೆಯಲ್ಲಿ ಹೊತ್ತು ಸಾಗೋ ಬದಲು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಹೊತ್ತು ಸಾಗೋದನ್ನ ನೋಡೋದೇ ಪರಮಾನಂದ. ಇಂದು ಬೆಳಗ್ಗೆ ನಡೆದ ಬ್ರಹ್ಮರಥೋತ್ಸವವನ್ನ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಹೀಗಾಗಿ ಕ್ಷೇತ್ರದ ರಥಬೀದಿ ಭಕ್ತ ಗಡಣದಿಂದ ತುಂಬಿ ತುಳುಕುತ್ತಿತ್ತು.

WhatsApp Image 2020 12 20 at 8.55.08 PM 2

ಇಂದು ಮುಂಜಾನೆ 7.20ರ ಧನುರ್ ಲಗ್ನದಲ್ಲಿ, ಬ್ರಹ್ಮ ರಥೋತ್ಸವ ಸಂಪನ್ನಗೊಂಡಿತು. ಕೊರೊನಾ ಹಿನ್ನಲೆಯಲ್ಲಿ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಅಂತರ್ ಜಿಲ್ಲೆ, ಅಂತರ್ ರಾಜ್ಯ ಭಕ್ತರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ಆದರೆ ರಥೋತ್ಸವ ಸೇವೆ ಮಾಡಿದವರಿಗೆ ಮಾತ್ರ ರಥ ಎಳೆಯಲು ಅವಕಾಶ ನೀಡಲಾಗಿತ್ತು. ರಥೋತ್ಸವದ ವೇಳೆ ಸಾಕಷ್ಟು ಭಕ್ತರು ಜಮಾಯಿಸಿದ್ರು. ನಿಯಾಮಾವಳಿಗಳ ಕಾರಣದಿಂದಾಗಿ ಪ್ರತಿ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಕುಕ್ಕೆಯಲ್ಲಿ ಚಂಪಾಷಷ್ಠಿ ಸಂಭ್ರಮಕ್ಕೆ ತೆರೆಬಿದ್ದಿದೆ. ಆದರೆ ವರ್ಷವಧಿ ಉತ್ಸವ ಮುಂದಿನ ಪೌರ್ಣಮಿ ಪರ್ಯಂತೆ ಕ್ಷೇತ್ರದಲ್ಲಿ ನಡೆಯುತ್ತೆ. ಅಂತಿಮ ದಿನ ಮಹಾ ಸಂಪ್ರೋಕ್ಷಣೆ ನಡೆದು ಕ್ಷೇತ್ರದ ಅದ್ಧೂರಿ ಸಂಭ್ರಮಕ್ಕೆ ಅಧಿಕೃತ ತೆರೆಬೀಳುತ್ತೆ.

Share This Article
Leave a Comment

Leave a Reply

Your email address will not be published. Required fields are marked *