ಮುಂಬೈ: ಕಿರುತೆರೆಯಲ್ಲಿ ಪ್ರಸಾರವಾಗುವ ಕ್ರೈಂ ಶೋದಿಂದ ಪ್ರೇರಿತರಾಗಿ 13 ವರ್ಷದ ಬಾಲಕನನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿರುವ ಘಟನೆ ಭಾನುವಾರ ಮುಂಬೈ ಉಪನಗರ ಮಲಾಡ್ ನಲ್ಲಿ ನಡೆದಿದೆ. ಅಲ್ಲದೆ ಮಗು ಹಿಂದಿರುಗಿಸಲು 10 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ಶೇಖರ್ ವಿಶ್ವಕರ್ಮ(35) ಮತ್ತು ದಿವ್ಯಾಂಶು ವಿಶ್ವಕರ್ಮ(21) ಎಂದು ಆರೋಪಿಗಳನ್ನು ಗುರುತಿಸಲಾಗಿದೆ. ಮನೆಯಿಂದ ಹೊರಗೆ ಆಟೋ ರಿಕ್ಷಾದಲ್ಲಿ ಆಟವಾಡುತ್ತಿರುವ ಬಾಲಕನನ್ನು 2.30 ಗಂಟೆಗಳ ನಂತರ ಆರೋಪಿಗಳು ಅಪಹರಿಸಿದ್ದಾರೆ. ನಂತರ ಬಾಲಕನ ತಂದೆ ಮೊಬೈಲ್‍ಗೆ ಕರೆ ಮಾಡಿ ಹತ್ತು ಲಕ್ಷ ರೂ ನೀಡಿದರೆ ಬಾಲಕನನ್ನು ವಾಪಸ್ ಕಳುಹಿಸುವುದಾಗಿ ಆರೋಪಿ ಬೇಡಿಕೆ ಇಟ್ಟಿದ್ದಾನೆ.
ಈ ಕುರಿತಂತೆ ಬಾಲಕನ ತಂದೆ ಪೊಲೀಸರ ಮೊರೆ ಹೋಗಿದ್ದಾರೆ. ನಂತರ ಮಲಾಡ್ (ಪಶ್ಚಿಮ)ದ ವಾಲ್ನಾಯ್ ಕಾಲೋನಿಯಲ್ಲಿದ್ದ ಆರೋಪಿಗಳ ಫೋನ್ ಕರೆಯನ್ನು ಟ್ರ್ಯಾಕ್ ಮಾಡಿ ಪತ್ತೆ ಹಚ್ಚಿ ಸುಮಾರು 7.30ಕ್ಕೆ ಬಂಧಿಸಿದ್ದಾರೆ. ಬಾಲಕನಿಗೆ ಯಾವುದೇ ತೊಂದರೆಯಾಗದಂತೆ ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಕ್ರೈಂ ಶೋದಿಂದ ಪ್ರೇರಿತರಾಗಿ ಬಾಲಕನನ್ನು ಅಪಹರಣ ಮಾಡಲು ಯೋಜಿಸಿದೆವು ಎಂದು ತಿಳಿಸಿದ್ದಾರೆ. ಇದೀಗ ಭಾರತೀಯ ದಂಡ ಸಂಹಿತೆಯ ವಿವಿಧ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.