ಬೆಂಗಳೂರು: ಕೊರೊನ ಎರಡನೇ ಅಲೆಯಲ್ಲಿ ಅಂಬ್ಯುಲೆನ್ಸ್ ಗಳ ಕೊರತೆ, ದುಪ್ಪಟ್ಟು ಹಣ ಪೀಕಲಾಟ ಸಮಸ್ಯೆಗಳ ನಡುವೆ ಕೊರೊನ ಸೋಂಕಿತರಿಗೆ ಯಾವುದೇ ಸಮಸ್ಯೆಯಾಗದಂತೆ ಸೋಂಕಿತರ ನೆರವಿಗೆ ಧಾವಿಸಿ, ಉಚಿತ ಸೇವೆ ನೀಡಲು ದಾನಿಗಳು ತಾಲೂಕಿಗೆ ಅಂಬ್ಯುಲೆನ್ಸ್ ನೀಡಿದ್ದರು. ಆದರೆ ಇದೀಗ ಕಿಡಿಗೇಡಿಗಳು ಆ ಅಂಬ್ಯುಲೆನ್ಸ್ ಗೆ ಕಲ್ಲು ತೂರಾಟ ನಡೆಸಿರುವ ಘಟನೆ ನೆಲಮಂಗಲದಲ್ಲಿ ವರದಿಯಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿ ಅಂಬ್ಯುಲೆನ್ಸ್ ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ನೆಲಮಂಗಲ ನಗರದ ಪುರಸಭೆ ಮಾಜಿ ಅಧ್ಯಕ್ಷ ನಾರಾಯಣ ಗೌಡ ಕೊರೊನ ಸಂದರ್ಭದಲ್ಲಿ ಉಂಟಾಗಿದ್ದ ಅಂಬ್ಯುಲೆನ್ಸ್ ಸಮಸ್ಯೆಯನ್ನು ಗಮನಿಸಿ ಜಿಲ್ಲೆಯ ಸೋಂಕಿತರಿಗೆ ಉಚಿತವಾಗಿ ಸೇವೆಗಾಗಿ ಅಂಬ್ಯುಲೆನ್ಸ್ ದಾನ ನೀಡಿದ್ದರು. ಇದನ್ನೂ ಓದಿ:ಅಂಬ್ಯುಲೆನ್ಸ್ ಚಾಲಕನ ಒಂದು ಸುಳ್ಳಿಗೆ ಸೋಂಕಿತ ಮಹಿಳೆ ಬಲಿ
ಇದೀಗ ಕಿಡಿಗೇಡಿಗಳ ಅವಾಂತರದಿಂದಾಗಿ ಕೊರೊನ ಸೋಂಕಿತರಿಗೆ ಉಚಿತ ಸೇವೆ ನೀಡುತಿದ್ದ ಅಂಬ್ಯುಲೆನ್ಸ್ ನ ಮುಂಭಾಗದ ಗಾಜು ಪುಡಿಪುಡಿಯಾಗಿದ್ದು, ಕಿಡಿಗೇಡಿಗಳು ಯಾರು ಇಲ್ಲದ ವೇಳೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನೆಗೆ ಯಾವುದೇ ನಿಖರವಾದ ಕಾರಣ ತಿಳಿದು ಬಂದಿಲ್ಲ.