ನವದೆಹಲಿ: ಪಾಕಿಸ್ತಾನಕ್ಕೆ ಕಾಶ್ಮೀರದ ಬಿಕ್ಕಟ್ಟು ಮಾತ್ರ ಇದೆ. ಇದನ್ನು ಭಾರತದೊಂದಿಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ಹೇಳುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಚ್ಚರಿ ಮೂಡಿಸಿದ್ದಾರೆ.
ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ನೇತೃತ್ವದಲ್ಲಿ ನಡೆದ ಶ್ರೀಲಂಕಾ-ಪಾಕಿಸ್ತಾನ ಟ್ರೇಡ್ ಆ್ಯಂಡ್ ಇನ್ವೆಸ್ಟ್‍ಮೆಂಟ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ನಮ್ಮದು ಕಾಶ್ಮೀರ ವಿವಾದ ಮಾತ್ರ ಇರುವುದು. ಮಾತುಕತೆ ಮೂಲಕ ಮಾತ್ರ ಇದನ್ನು ಬಗೆಹರಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ನಾನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೆ. ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳೋಣ ಎಂದು ಕೇಳಿಕೊಂಡಿದ್ದೆ ಎಂದು ಇಮ್ರಾನ್ ಖಾನ್ ಇದೇ ವೇಳೆ ಹೇಳಿದ್ದಾರೆ.
ನಾನು ಯಶಸ್ವಿಯಾಗಿಲ್ಲ, ಆದರೆ ಅಂತಿಮವಾಗಿ ಪ್ರಜ್ಞೆಯು ಮೇಲುಗೈ ಸಾಧಿಸಲಿದೆ ಎಂಬ ಆಶಾವಾದವನ್ನು ಹೊಂದಿದ್ದೇನೆ. ವ್ಯಾಪಾರ ಸಂಬಂಧಗಳನ್ನು ಸುಧಾರಿಸುವ ಮೂಲಕ ಬಡತನವನ್ನು ನಿಭಾಯಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಬಳಿಕ ಶ್ರೀಲಂಕಾದ ವಿದೇಶಾಂಗ ಸಚಿವಾಲಯ(ಎಂಇಎ) ಪ್ರತಿಕ್ರಿಯಿಸಿ, ಭಯೋತ್ಪಾದನೆ ಹಾಗೂ ಹಗೆತನವಿಲ್ಲದ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ. ನಮ್ಮ ಸ್ಥಾನ ಎಲ್ಲರಿಗೂ ತಿಳಿದಿದೆ. ಭಯೋತ್ಪಾದನೆ, ಹಗೆತನ ಹಾಗೂ ಹಿಂಸಾಚಾರವಿಲ್ಲದ ವಾತಾವರಣದಲ್ಲಿ ಪಾಕಿಸ್ತಾನದೊಂದಿಗಿನ ಸಾಮಾನ್ಯ ನೆರೆಯ ಸಂಬಂಧವನ್ನು ಭಾರತ ಬಯಸುತ್ತದೆ ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದರು.
ಅಚ್ಚರಿಯ ಸಂಗತಿ ಎಂದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿಮಾನ ಭಾರತದ ವಾಯುಪ್ರದೇಶದ ಮೂಲಕ ಶ್ರೀಲಂಕಾಗೆ ಹಾರಲು ಭಾರತ ಸರ್ಕಾರ ಅನುಮತಿ ನೀಡಿದೆ. ಕೊರೊನಾ ಬಳಿಕ ಶ್ರೀಲಂಕಾಗೆ ಭೇಟಿ ನೀಡಿದ ಮೊದಲ ಪ್ರಧಾನಿ ಇಮ್ರಾನ್ ಖಾನ್ ಆಗಿದ್ದಾರೆ.