– ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದಕ್ಕೂ ಅನುಮತಿ
ಬೆಂಗಳೂರು: ಕೊರೊನಾ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಾರದಿಂದ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ. ಕಾಲೇಜು ಹಾಗೂ ಸಿನಿಮಾ ಹಾಲ್‍ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ತಮ್ಮ ಕಾವೇರಿ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಲಾಕ್‍ಡೌನ್ ಸಡಿಲಿಕೆ ಕುರಿತು ಚರ್ಚೆ ನಡೆಸಿದ್ದು, ಬಳಿಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಲಾಕ್‍ಡೌನ್ ಸಡಿಲಿಕೆ ಮಾಡಿ ಆದೇಶಿಸಿದ್ದಾರೆ. ಕೊರೊನಾ ನಿಯಮವನ್ನು ಪಾಲಿಸಿಕೊಂಡು ಜುಲೈ 26ರಿಂದ ಕಾಲೇಜು ಆರಂಭಿಸಲು ಸರ್ಕಾರ ಸೂಚನೆ ನೀಡಿದೆ. ಆದರೆ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕನಿಷ್ಠ 1 ಡೋಸ್ ಆದರೂ ಕೊರೊನಾ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ.
Advertisement
Advertisement
ತರಬೇತಿ ಕೇಂದ್ರಗಳನ್ನು ತೆರೆಯಲು ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕನಿಷ್ಟ ಒಂದು ಡೋಸ್ ಕೊರೊನಾ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ.
Advertisement
ಮೂರು ತಿಂಗಳಿನಿಂದ ಬಂದ್ ಆಗಿದ್ದ ಚಿತ್ರ ಮಂದಿರಗಳ ಆರಂಭಕ್ಕೆ ಸಹ ಸರ್ಕಾರ ಅನುಮತಿ ನೀಡಿದೆ. ಆದರೆ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಹಾಗೂ ಕೊರೊನಾ ನಿಯಮಗಳನ್ನು ಪಾಲಿಸಿ ನಾಳೆಯಿಂದ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ನೈಟ್ ಕರ್ಫ್ಯೂ ಅವಧಿಯನ್ನು ರಾತ್ರಿ 10 ರಿಂದ ಬೆಳಗ್ಗೆ 5ರ ವರಗೆ ನಿಗದಿ ಮಾಡಲಾಗಿದೆ.
Advertisement
ಸಿಎಂ ಜೊತೆ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಸಚಿವ ಆರ್.ಅಶೋಕ್, ಮದುವೆಗೆ 100 ಜನರ ಮಿತಿ, ಅಂತ್ಯ ಸಂಸ್ಕಾರಕ್ಕೆ 20 ಜನರ ಮಿತಿ ಮುಂದುವರಿಸಿದ್ದೇವೆ. ಸಿನಿಮಾ ಥಿಯೇಟರ್ ಗಳಿಗೆ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಅನುಮತಿ ನೀಡಿದ್ದೇವೆ. ನೈಟ್ ಕರ್ಫ್ಯೂ ಅವಧಿ ಕಡಿಮೆ ಮಾಡಿದ್ದೇವೆ. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳಿಗೆ ಅನುಮತಿ ಕೊಟ್ಟಿದ್ದೇವೆ. ದೇವಸ್ಥಾನಗಳಿಗಿದ್ದ ನಿರ್ಬಂಧ ತೆರವು ಮಾಡಲಾಗಿದೆ. ದೇವಸ್ಥಾನಗಳಲ್ಲಿ ಇದುವರೆಗೆ ದರ್ಶನಕ್ಕೆ ಮಾತ್ರ ಅವಕಾಶ ಇತ್ತು. ಈಗ ಪೂಜಾ ಕೈಂಕರ್ಯ, ಪ್ರಸಾದ ವಿತರಣೆಗೂ ಅವಕಾಶ ನೀಡಲಾಗಿದೆ. ಅರ್ಚನೆ, ಹರಕೆ, ತೀರ್ಥ, ಪ್ರಸಾದ ಸೇರಿದಂತೆ ಹಲವು ಪೂಜಾ ಕಾರ್ಯಗಳಿಗೆ ಅನುಮತಿ ನೀಡಲಾಗಿದೆ. ಸಭೆಯಲ್ಲಿ ಸ್ವಿಮ್ಮಿಂಗ್ ಪೂಲ್ ಗಳ ಬಗ್ಗೆ ಚರ್ಚೆ ನಡೆದಿಲ್ಲ, ಜನರಿಗೆ ಕಷ್ಟವಾಗದಂತೆ ಸಡಿಲಿಕೆ ಕೊಟ್ಟಿದ್ದೇವೆ. ಮೂರನೇ ಅಲೆಗೆ ಬೇಕಾದ ತಯಾರಿ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದರು.
ಜುಲೈ 26ಕ್ಕೆ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತದೆ. ಸರ್ಕಾರದ ಸಾಧನೆಗಳ ಬಗ್ಗೆ ಇಲಾಖಾವಾರು ಮಾಹಿತಿ ಬಿಡುಗಡೆ ಮಾಡಲಾಗುತ್ತದೆ. ಜುಲೈ 26ರಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ, ಸಂಜೆ ಶಾಸಕರಿಗೆ ಔತಣ ಕೂಟ ಇದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಡಿಸಿಎಂ ಅಶ್ವತ್ಥ ನಾರಾಯಣ, ಸಿಎಸ್ ಪಿ.ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆಗಮನ, ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿಗಳು ಸಚಿವ ಅರವಿಂದ್ ಲಿಂಬಾವಳಿ ಸಭೆಯಲ್ಲಿ ಭಾಗಿಯಾಗಿದ್ದರು.