ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಾಲೇಜಿನ ಮೆರಿಟ್ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಮಾಜಿ ನೀಲಿ ಚಿತ್ರಗಳ ನಟಿ ಸನ್ನಿ ಲಿಯೋನ್ ಮತ್ತು ಮಿಯಾ ಖಲೀಫಾ ಅವರ ಹೆಸರು ಕಾಣಿಸಿಕೊಂಡಿದೆ.
ಪಶ್ಚಿಮ ಬಂಗಾಳದ ಬಾರತಸ್ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ಇಂಗ್ಲಿಷ್ ಆನರ್ಸ್ ವಿದ್ಯಾರ್ಥಿಗಳ ಮೆರಿಟ್ ಲಿಸ್ಟ್ ಅನ್ನು ಘೋಷಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಸನ್ನಿ ಲಿಯೋನ್ ಅವರ ಹೆಸರು ನೋಂದಣಿ ಸಂಖ್ಯೆ ಸಮೇತ ಟಾಪ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ವಿಚಾರವಾಗಿ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.
ಇನ್ನೊಂದು ಮುಜುಗರದ ಸಂಗತಿಯೆಂದರೆ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿ, ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಮತ್ತು ಡ್ಯಾನಿ ಡೇನಿಯಲ್ ಅವರ ಹೆಸರು ಕಾಣಿಸಿಕೊಂಡಿದೆ. ಇವರ ನಂತರ ಮೂರನೇ ಸ್ಥಾನದಲ್ಲಿ ಸನ್ನಿ ಕಾಣಿಸಿಕೊಂಡಿದ್ದಾರೆ. ಇದರ ಬಗ್ಗೆ ಪ್ರತ್ಯೇಕವಾಗಿ ಇನ್ನೊಂದು ದೂರು ನೀಡಿರುವ ತೃಣಮೂಲ ಛತ್ರ ಪರಿಷತ್ ನಡೆಸುತ್ತಿರುವ ಕಾಲೇಜು ವಿದ್ಯಾರ್ಥಿ ಸಂಘವು ಶಿಕ್ಷಣ ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿವೆ.
ಇದಕ್ಕೂ ಮುನ್ನಾ ಶುಕ್ರವಾರ ಪಶ್ಚಿಮ ಬಂಗಾಳದ, ದಕ್ಷಿಣ 24 ಪರಗಣ ಜಿಲ್ಲೆಯ ಬಡ್ಜ್ ಬಡ್ಜ್ ಕಾಲೇಜಿನಲ್ಲಿ ಇಂಗ್ಲಿಷ್‍ನಲ್ಲಿ ಬಿಎ (ಆನರ್ಸ್)ಗೆ ಆಯ್ಕೆಯಾದ 157 ಅಭ್ಯರ್ಥಿಗಳ ಪಟ್ಟಿಯಲ್ಲೂ ಕೂಡ ಸನ್ನಿ ಲಿಯೋನ್ ಹೆಸರು ಕಂಡ ಬಂದಿತ್ತು. ಈ ಕಾಲೇಜಿನ ಪಟ್ಟಿಯಲ್ಲಿ ಸನ್ನಿ ಹೆಸರು 151ನೇ ಸ್ಥಾನದಲ್ಲಿತ್ತು. ಆದರೆ ಶನಿವಾರ ಮೊದಲ ಮೂರನೇ ಸ್ಥಾನದಲ್ಲಿ ನೀಲಿ ಚಿತ್ರದ ನಟ-ನಟಿಯ ಹೆಸರು ಇರುವ ಕಾಲೇಜು ಅಡಳಿತಕ್ಕೆ ಮುಜುಗರವನ್ನುಂಟು ಮಾಡಿದೆ.
ಗುರುವಾರ ಕೋಲ್ಕತ್ತಾ ನಗರದಲ್ಲಿರುವ ಅಸುತೋಷ್ ಕಾಲೇಜಿನಲ್ಲೂ ಕೂಡ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿತ್ತು. ಇದರಲ್ಲೂ ಕೂಡ ಸನ್ನಿ ಲಿಯೋನ್ ಹೆಸರು ಕಾಣಿಸಿಕೊಂಡಿತ್ತು. ಈ ವಿಚಾರವಾಗಿ ಕಾಲೇಜು ಆಡಳಿತ ಮಂಡಳಿ ಲಾಲ್‍ಬಜಾರ್ ನಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಜೊತೆಗೆ ಆಂತರಿಕ ತನಿಖೆಯು ನಡೆಯಬೇಕು ಎಂದು ಕಾಲೇಜಿನ ಅಧಿಕಾರಿಯೊಬ್ಬರು ಪೊಲೀಸರಿಗೆ ಒತ್ತಾಯ ಮಾಡಿದ್ದರು.
ಕೊರೊನಾ ವೈರಸ್ ಕಾರಣದಿಂದ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ, ಈ ವರ್ಷ ಪದವಿಪೂರ್ವ ಕೋರ್ಸ್‍ಗಳಿಗೆ ಪ್ರವೇಶಾತಿ ಸಂಪೂರ್ಣವಾಗಿ ಆನ್‍ಲೈನ್ ಆಗಿರುತ್ತದೆ. ಜೊತೆಗೆ ಯಾವುದೇ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಘೋಷಣೆ ಮಾಡಿತ್ತು. ಕೆಲವರು ಇದನ್ನು ದರುಪಯೋಗಪಡಿಸಿಕೊಳ್ಳುತ್ತಿದ್ದಾರೆ.