ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ವಾಕ್ಸಮರ ತೀವ್ರಗೊಂಡಿದೆ. ಇದೀಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.
ಪುರುಲಿಯಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ದಿಲೀಪ್, ಮಮತಾ ಬ್ಯಾನರ್ಜಿ ಅವರು ತಮ್ಮ ಕಾಲು ತೋರಿಸಬೇಕೆಂದರೆ ಅವರು ಬರ್ಮುಡಾ ಧರಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಮಮತಾ ಅವರ ಒಂದು ಕಾಲಿಗೆ ಗಾಯವಾಗಿದ್ದು, ಬ್ಯಾಂಡೇಜ್ ಹಾಕಲಾಗಿತ್ತು. ಆದರೆ ಇದೀಗ ಅದನ್ನು ತೆಗೆಯಲಾಗಿದೆ. ಆದರೂ ಅವರು ಅದನ್ನು ತಮ್ಮ ಸೀರೆಯಿಂದ ಮುಚ್ಚಿಕೊಂಡಿರುತ್ತಾರೆ. ಇನ್ನೊಂದು ಕಾಲು ಕಾಣಿಸುತ್ತದೆ. ಈ ರೀತಿ ಸೀರೆ ಧರಿಸುವವರನ್ನು ನಾನು ಎಲ್ಲೂ ನೋಡಿಲ್ಲ ಎಂದು ಹೇಳಿದ್ದಾರೆ.
ದಿಲೀಪ್ ಅವರ ಈ ಹೇಳಿಕೆಗೆ ಟಿಎಂಸಿ ಮಹಿಳಾ ನಾಯಕಿಯರು ಕಿಡಿಕಾರಿದ್ದಾರೆ. ಅಲ್ಲದೆ ವಕ್ತಾರೆ ಮಹುಮಾ ಮೋಯಿತ್ರಾ ಈ ಬಗ್ಗೆ ಟ್ವೀಟ್ ಮಾಡಿ, ಬಿಜೆಪಿ ಅಧ್ಯಕ್ಷರು ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ಮಮತಾ ಅವರು ಸೀರೆ ಬದಲು ಬರ್ಮುಡಾ ಧರಿಸುವಂತೆ ಹೇಳುತ್ತಾರೆ. ಒಬ್ಬ ಮಹಿಳೆ ಬಗ್ಗೆ ಅಪಮಾನವಾಗುವಂತಹ ಹೇಳಿಕೆ ನೀಡುವ ಮೂಲಕ ವಿಕೃತ ಕೋತಿಗಳು ಪಶ್ಚಿಮ ಬಂಗಾಳವನ್ನು ಗೆಲ್ಲುವ ಕನಸು ಕಾಣುತ್ತಿವೆ ಎಂದು ಜರಿದಿದ್ದಾರೆ.
ಇತ್ತೀಚೆಗೆ ನಂದಿಗ್ರಾಮ ಚುನಾವಣಾ ಪ್ರಚಾರದ ವೇಲೆ ಮಮತಾ ಅವರ ಕಾಲಿಗೆ ಗಾಯಗಳಾಗಿತ್ತು. ಹೀಗಾಗಿ ಅವರ ಎಡಗಾಲಿಗೆ ವೈದ್ಯರು ಬ್ಯಾಂಡೇಜ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ದೀದಿ ವೀಲ್ ಚೇರ್ ನಲ್ಲಿಯೇ ಕುಳೀತುಕೊಂಡು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಇತ್ತ ಬಿಜೆಪಿ ಮಾತ್ರ ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ದೀದಿ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದೆ.