ಕಾಲಿಗೆ ಸರಪಳಿ ಬಿಗಿದು ಪದ್ಮಾಸನದಲ್ಲೇ ಸಮುದ್ರದಲ್ಲಿ ಈಜಿ ನಾಗರಾಜ ಖಾರ್ವಿಯಿಂದ ಗಿನ್ನೀಸ್ ರೆಕಾರ್ಡ್!

Public TV
2 Min Read
MNG 1

ಮಂಗಳೂರು: ಸಾಧನೆ ಮಾಡಬೇಕು ಅದು ಎಲ್ಲರೂ ಗುರುತಿಸುವಂತಾಗಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಅಂತೆಯೇ ಇಲ್ಲೊಬ್ಬರು ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಅದು ಕೂಡ ಕಾಲಿಗೆ ಸರಪಳಿ ಬಿಗಿದು, ಪದ್ಮಾಸನ ಹಾಕಿಕೊಂಡು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಮುದ್ರದಲ್ಲಿ ಈಜುವ ಮೂಲಕ. ಇವರ ಈ ಸಾಧನೆ ಅರ್ಹವಾಗಿಯೇ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲೆಯಾಗಿದೆ.

MNG RECORD 3

ಅಂದಹಾಗೆ ಇಷ್ಟೆಲ್ಲಾ ಸಾಧನೆಯನ್ನು ಮಾಡಿರುವ ಸಾಧಕನ ಹೆಸರು ನಾಗರಾಜ್ ಖಾರ್ವಿ. ಇವರು ವೃತ್ತಿಯಲ್ಲಿ ಶಿಕ್ಷಕರು. ಬಾಲ್ಯದಿಂದಲೇ ಈಜು ಬಲ್ಲವರಾಗಿದ್ದ ಇವರು ಅನೇಕ ವಿದ್ಯಾರ್ಥಿಗಳಿಗೆ ಈಜು ತರಬೇತಿಯನ್ನೂ ನೀಡಿದವರು. ಇವರು ಕೆಲ ವರ್ಷಗಳ ಹಿಂದೆ ಯೋಗಾಭ್ಯಾಸವನ್ನು ಕಲಿತಿದ್ದರು. ಈಜುವುದರಲ್ಲಿ ಯೋಗವನ್ನು ಯಾಕೆ ಅಳವಡಿಕೆ ಮಾಡಿಕೊಳ್ಳಬಾರದು ಎನ್ನುವ ಯೋಚನೆಯಂತೆ ಪದ್ಮಾಸನ ಹಾಕಿ ಈಜಲು ಅಭ್ಯಾಸ ಮಾಡಲಾರಂಭಿಸಿದರು. ಅದರ ಫಲವಾಗಿಯೇ ಇದೀಗ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಈ ಸಾಧನೆ ದಾಖಲಾಗಿದೆ.

MNG RECORD 5

ಪ್ರವಾಸಿಗರ ನೆಚ್ಚಿನ ಬೀಚ್ ತಣ್ಣೀರುಬಾವಿಯಲ್ಲಿ ಕುತೂಹಲದಿಂದ ನೆರೆದಿದ್ದ ಜನರ ಮಧ್ಯೆ ನಾಗರಾಜ್ ಖಾರ್ವಿ ಅವರು ಕಡಲಿನಲ್ಲಿ ಸಾಧನೆ ಮಾಡಿದ್ರು. ನೂರಾರು ಜನರ ಸಮ್ಮುಖದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಆಳ ಸಮುದ್ರಕ್ಕೆ ಇಳಿದೇ ಬಿಟ್ಟರು. ಬ್ರೆಸ್ಟ್ ಸ್ಟ್ರೋಕ್ ಮೂಲಕ ಈಜುತ್ತಾ ಒಂದು ಕಿಲೋ ಮೀಟರ್ ದೂರದ ಗುರಿಯನ್ನ ತಲುಪಿ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಲಗ್ಗೆ ಇಟ್ಟರು. ಸಮುದ್ರದ ಅಬ್ಬರ ಅಲೆಗಳ ಒತ್ತಡದ ಮಧ್ಯೆಯೂ ನಾಗರಾಜ್ ಖಾರ್ವಿ 25 ನಿಮಿಷ 16 ಸೆಕೆಂಡುಗಳಲ್ಲಿ ಗುರಿ ತಲುಪಿ ನೆರೆದಿದ್ದವರನ್ನ ಹುಬ್ಬೇರಿಸುವಂತೆ ಮಾಡಿದ್ರು.

MNG RECORD 6

ನಾಗರಾಜ್ ಖಾರ್ವಿ ಅವರು ಈ ರೀತಿ ಸಾಧನೆಯನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನಾಗರಾಜ್ ಖಾರ್ವಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ತನ್ನ ಗುರುಗಳಾದ ಬಿಕೆ ನಾಯ್ಕ್ ಅವರ ಸಹಾಯದಿಂದ ಲಿಮ್ಕಾ ದಾಖಲೆಗೂ ಕಾಲಿಟ್ಟಿದ್ದಾರೆ. ಇದೇ ಸ್ಫೂರ್ತಿಯಿಂದ ಯೋಗಾಸನಕ್ಕೂ ಅಗತ್ಯ ಪ್ರೋತ್ಸಾಹ ಸಿಗಬೇಕೆನ್ನುವ ನಿಟ್ಟಿನಲ್ಲಿ ಪದ್ಮಾಸನ ಮೂಲಕ ತಣ್ಣೀರುಬಾವಿ ಬೀಚ್‍ನಲ್ಲಿ ವಿಶಿಷ್ಟ ಸಾಧನೆಗೈದರು. ಈ ವೇಳೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೆಲ್ಲಕ್ಕೂ ಮಿಕ್ಕಿ ನಾಗರಾಜ್ ಖಾರ್ವಿ ಗುರುಗಳೇ ಮುಂದೆ ನಿಂತು ಶಿಷ್ಯನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

MNG RECORD 2

ವೃತ್ತಿಯಲ್ಲಿ ಶಿಕ್ಷಕರಾದರೂ ಈಜುಗಾರಿಕೆಯಲ್ಲಿ ಇವರು ತೋರಿಸಿರುವ ಸಾಧನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಜಿನ ಜೊತೆಗೆ ಪದ್ಮಾಸನ ಭಂಗಿ ಮೂಲಕ ಯೋಗಾಸನವನ್ನು ಪ್ರಚುರಪಡಿಸಿದ ವಿಚಾರವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

MNG RECORD 1

Share This Article
Leave a Comment

Leave a Reply

Your email address will not be published. Required fields are marked *