ಗದಗ: ತಾಲೂಕಿನ ಹುಲಕೋಟಿ ರೂರಲ್ ಎಂಜಿನಿಯರಿಂಗ್ ಕಾಲೇಜ್ ಬಳಿ ಕಾರು ಹಾಗೂ ಲಾರಿ ಮಧ್ಯೆ ಡಿಕ್ಕಿ ವೇಳೆ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ.
ಕಾರು ಚಾಲಕ ಅನ್ವರ್ (57) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಈಶ್ವರಗೌಡ ಪಾಟೀಲ್(54) ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಶಿವಾಬಾಯಿ, ರುದ್ರಗೌಡ ಹಾಗೂ ಮಹಾರಾಜ ಎಂಬವರಿಗೆ ಗಾಯಗಳಾಗಿವೆ.
ಮೃತ ಹಾಗೂ ಗಾಯಾಳು ಮೂಲತಃ ರೋಣ ತಾಲೂಕಿನ ಮಾಳವಾಡ ಗ್ರಾಮದವರು. ಸದ್ಯ ಧಾರವಾಡದಲ್ಲಿ ವಾಸವಿದ್ದರು. ಮಾಳವಾಡದ ತಮ್ಮ ಜಮೀನು ನೋಡಿಕೊಂಡು ಧಾರವಾಡಕ್ಕೆ ಮರಳುತ್ತಿರುವಾಗ ದಾರಿ ಮಧ್ಯೆ ಈ ದುರ್ಘಟನೆ ನಡೆದಿದೆ.
ಲಾರಿ ಹೊಡೆತಕ್ಕೆ ಕಾರು ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.