ಕಾರವಾರ: ಇಲ್ಲಿನ ವಾಣಿಜ್ಯ ಬಂದರು ವಿಸ್ತರಣೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿ, ಮಹತ್ವದ ಆದೇಶ ಪ್ರಕಟಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಒಕಾ ಅವರಿದ್ದ ದ್ವಿ ಸದಸ್ಯ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ. ವಿಚಾರಣೆ ನಡೆಸಿದ ಪೀಠ, ಮೀನುಗಾರರ ಅರ್ಜಿ ತಿರಸ್ಕರಿಸಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಬಹುದು ಎಂದು ಕರ್ನಾಟಕ ರಾಜ್ಯ ಮೆರಿಟೈಮ್ ಬೋರ್ಡ್ ಗೆ ಸೂಚಿಸಿದೆ.
ಸಾಗರ ಮಾಲಾ ಯೋಜನೆಯಲ್ಲಿ 274 ಕೋಟಿ ವೆಚ್ಚದಲ್ಲಿ ಬೈತಖೋಲ್ ವಾಣಿಜ್ಯ ಬಂದರಿನ 250 ಮೀಟರ್ ಜಟ್ಟಿ ಹಾಗೂ 880 ಮೀಟರ್ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು 2019ರಲ್ಲಿ ಪ್ರಾರಂಭಿಸಲಾಗಿತ್ತು. ಅದನ್ನು ವಿರೋಧಿಸಿ ಬೈತಖೋಲ್ ಮೀನುಗಾರರ ಸಂಘಟನೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. 2020 ರಲ್ಲಿ ಹೈಕೋರ್ಟ್ ಕಾಮಗಾರಿಗೆ ತಡೆ ನೀಡಿತ್ತು.