ಕಾರವಾರ: ಪಶ್ಚಿಮ ಕರಾವಳಿಯ ಹವಳದ ದಿಬ್ಬಗಳಲ್ಲಿ ಕಾಣಸಿಗುವ ಅಪರೂಪದ ರೇಸರ್ ಮೀನು ಬೈತಕೋಲ್ ಬಂದರಿನಲ್ಲಿ ಸಿಕ್ಕಿದೆ.
ಮೀನುಗಾರ ಜನಾರ್ಧನ್ ಹರಿಕಾಂತ್ ಅವರ ಬಲೆಗೆ ಈ ಮೀನು ಸಿಕ್ಕಿದ್ದು, ಇದೇ ಮೊದಲಬಾರಿಗೆ ಅರಬ್ಬಿ ಸಮುದ್ರದ ಕರಾವಳಿ ಭಾಗದಲ್ಲಿ ರೇಸರ್ ಮೀನು ಪತ್ತೆಯಾಗಿದೆ.
ವಿಶೇಷತೆ ಏನು?
ಇದು ಮೂಲತಃ ಸಮುದ್ರ ಕುದುರೆ ಜಾತಿಗೆ ಸೇರಿದ ಮೀನಾಗಿದೆ. ಇದರ ದೇಹ ಬಲು ವಿಶಿಷ್ಟವಾಗಿದ್ದು, ಅತೀ ಗಟ್ಟಿಯಾಗಿದೆ. ಮುಖಭಾಗ ಪೈಪಿನಂತೆ ಉದ್ದವಾಗಿದ್ದು, ಇದರ ರೆಕ್ಕೆಗಳು ಕಬ್ಬಿಣದಂತೆ ಗಟ್ಟಿಯಾಗಿರುತ್ತದೆ. ದೇಹ ಚಿನ್ನ ಹಾಗೂ ತಾಮ್ರದ ಬಣ್ಣ ಹೊಂದಿರುತ್ತದೆ.
ಎಲ್ಲ ಮೀನಿನಂತೆ ನೇರವಾಗಿ ಈಜುವುದಿಲ್ಲ. ಬದಲಿಗೆ ತಲೆಯನ್ನು ಕೆಳಕ್ಕೆ ಮಾಡಿ ಈಜುತ್ತದೆ. ತನ್ನ ಉದ್ದವಾದ ಪೈಪ್ ನಂತೆ ಇರುವ ಬಾಯಿಯಿಂದ ನೀರನ್ನು ದೇಹದ ಒಳಕ್ಕೆ ಎಳೆದುಕೊಂಡು ಸಮುದ್ರದಲ್ಲಿನ ಚಿಕ್ಕಪುಟ್ಟ ಮೀನುಗಳನ್ನು ತಿಂದು ಬದುಕುತ್ತವೆ. ಹತ್ತರಿಂದ ಹದಿಮೂರು ಸೆಂಟಿಮೀಟರ್ ಬೆಳೆಯುತ್ತದೆ. ಆಫ್ರಿಕಾ, ಲಕ್ಷದ್ವೀಪ, ಸಮುದ್ರ ಕೊಳೆ ಇರುವ ಪ್ರದೇಶದಲ್ಲಿ ಇವು ವಾಸಿಸುತ್ತವೆ. ರೇಸರ್ ಮೀನು, ಪೈಪ್ ಫಿಷ್ ಸೆರಿದಂತೆ ಹಲವು ಹೆಸರುಗಳು ಇದಕ್ಕಿದೆ.
ಇವುಗಳ ಸೌಂದರ್ಯ ಹಾಗೂ ದೇಹದ ಆಕೃತಿಯಿಂದಾಗಿ ಅಕ್ವೇರಿಯಂಗಳಲ್ಲಿ ಅಲಂಕಾರಿಕ ಫಿಷ್ ಗಳಂತೆ ಸಾಕಲಾಗುತ್ತದೆ. ಕಾರವಾರದ ಕಡಲ ಜೀವಶಾಸ್ತ್ರಜ್ಞ ಶಿವಕುಮಾರ್ ಹರಿಗಿ ಹೇಳುವಂತೆ ಈ ಭಾಗದ ಕರಾವಳಿಯಲ್ಲಿ ಇದೇ ಮೊದಲಬಾರಿಗೆ ಕಂಡುಬಂದಿದೆ. ಇವು ಗುಂಪಾಗಿ ವಾಸ ಮಾಡುತ್ತವೆ. ಇವುಗಳ ಮುಖಭಾಗ ಹಾಗೂ ರೆಕ್ಕೆಗಳು ಉಳಿದ ಮೀನಿಗಿಂತ ಅತೀ ಗಟ್ಟಿಯಾಗಿರುತ್ತವೆ. ಇವುಗಳಲ್ಲಿ ಹಲವು ಪ್ರಭೇದಗಳಿವೆ ಎಂದು ಮಾಹಿತಿ ನೀಡಿದ್ದಾರೆ.