ಕಾರವಾರ: ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪ್ರದೇಶಗಳಿಗೆ ಇಂದು ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜನರಿಗೆ ಮಾಹಿತಿ ನೀಡದೇ ಕೆ.ಪಿ.ಸಿ.ಎಲ್ ಅಧಿಕಾರಿಗಳು ನೀರನ್ನು ಬಿಟ್ಟಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಜುಲೈ 23 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ನೆರೆ ಸೃಷ್ಟಿಯಾಗಿ ಅನಾಹುತ ಮಾಡಿತ್ತು. ಕಾಳಿ ನದಿ ಉಕ್ಕಿ ಹರಿದ ಪರಿಣಾಮ ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಟ್ಟಿದ್ದರಿಂದ ಕಾರವಾರ ತಾಲೂಕಿನ ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದವು. ಅದರಲ್ಲೂ ಜಲಾಶಯದ ಸಮೀಪದಲ್ಲೇ ಇರುವ ಮಲ್ಲಾಪುರ, ಕುರ್ನಿಪೇಟೆ, ಗಾಂಧಿನಗರ ಗ್ರಾಮಗಳಲ್ಲಿ ಮನೆಗಳೇ ಪ್ರವಾಹದಿಂದ ಕೊಚ್ಚಿ ಹೋಗಿದ್ದವು. ತಾಲೂಕಿನ ಕದ್ರಾ ಜಲಾಶಯದ ಸುತ್ತಮುತ್ತಲಿನ ಗ್ರಾಮಕ್ಕೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸೋಮವಾರ ಭೇಟಿ ನೀಡಿದರು. ಮಲ್ಲಾಪುರ, ಕುರ್ನಿಪೇಟೆ, ಗಾಂಧಿನಗರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದ ಆದ ಹಾನಿ ಕುರಿತು ವೀಕ್ಷಣೆ ಮಾಡಿದರು.
Advertisement
ಇದಾದ ನಂತರ ಕೆಪಿಸಿ ಅಧಿಕಾರಿಗಳ ಸಭೆಯನ್ನ ನಡೆಸಿದ ಸಿದ್ದರಾಮಯ್ಯ ಯಾವುದೇ ಮುನ್ಸೂಚನೆ ನೀಡದೆ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟು ಜನರನ್ನ ಸಮಸ್ಯೆಗೆ ಸಿಲುಕಿಸಿದ್ದೀರಿ ಎಂದು ಗರಂ ಆದರು. ಅಲ್ಲದೇ ನಿರಾಶ್ರಿತರಾದವರಿಗೆ ಕೆಪಿಸಿ ಕಾಲೋನಿಯಲ್ಲಿಯೇ ಉಳಿದುಕೊಳ್ಳಲು ಸೂರು ನೀಡುವಂತೆ ವಾರ್ನಿಂಗ್ ನೀಡಿದ್ದು ಕಾಯಂ ಬದಲಿ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.
Advertisement
Advertisement
ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳ ಜನರ ಜೊತೆ ಸಿದ್ದರಾಮಯ್ಯ ಸಭೆ ನಡೆಸಿ ಅಹವಾಲನ್ನ ಸ್ವೀಕರಿಸಿದರು. ಹಲವು ಗ್ರಾಮಸ್ಥರು ಸಿದ್ದರಾಮಯ್ಯನವರ ಮುಂದೆ ತಮ್ಮ ನೋವನ್ನ ಹೇಳಿಕೊಂಡಿದ್ದು, ತಮಗೆ ಪದೇ ಪದೇ ಪ್ರವಾಹದಿಂದ ಕಷ್ಟಕ್ಕೆ ಸಿಲುಕುವಂತಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
Advertisement
ಸಿದ್ದರಾಮಯ್ಯ ಕೆಪಿಸಿ ಅಧಿಕಾರಿಗಳ ಜೊತೆ ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳಿಗೂ ಕ್ಲಾಸ್ ತೆಗೆದುಕೊಂಡರು. ಸಿದ್ದರಾಮಯ್ಯನವರ ಜೊತೆ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಮಾಜಿ ಶಾಸಕರಾದ ಸತೀಶ್ ಸೈಲ್, ಮಂಕಾಳು ವೈದ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಆರ್.ವಿ ದೇಶಪಾಂಡೆ, ಕೆಪಿಸಿ ಅಧಿಕಾರಿಗಳು ನೋಟಿಸ್ ನೀಡದೆ ನೀರು ಬಿಟ್ಟು ಅನಾಹುತಕ್ಕೆ ಕಾರಣವಾಗಿದ್ದಾರೆ. ಸೂಕ್ತ ಪರಿಹಾರ ಹಾನಿಗೊಳಗಾದವರಿಗೆ ಸರ್ಕಾರ ಕೊಡಬೇಕು ಎಂದು ಆಗ್ರಹಿಸಿದರು. ಇದಲ್ಲದೇ ವಿಧಾನಸೌದದಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕಾರವಾರ ನಂತರ ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಲ್ಲದೇ ಅಂಕೋಲಾ ಪಟ್ಟಣದಲ್ಲೂ ನಿರಾಶ್ರಿತರ ಅಹವಾಲು ಸಭೆಯನ್ನ ನಡೆಸಿದರು. ಇದಾದ ನಂತರ ಯಲ್ಲಾಪುರಕ್ಕೆ ತೆರಳಿ ಅಲ್ಲೂ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಇದನ್ನೂ ಓದಿ: ನೆಟ್ ಇಲ್ಲದೇ ಮೊಬೈಲಿನಿಂದ ಹಣ ಪಾವತಿಸಿ – ಏನಿದು ಇ-ರುಪೀ?
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ಸಾಂತ್ವಾನ ಹೇಳಲು ಮುಂದಾಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲೂ ಸಾಕಷ್ಟು ಸಂಚಲನ ಮೂಡಿಸಿದೆ.