ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಭಾಗದ ಅರಣ್ಯ ವ್ಯಾಪ್ತಿಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿರುವ ಕುರಿತು ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್‍ಡಿ), ಸ್ಥಳೀಯ ಪೊಲಿಸರು, ಅರಣ್ಯ ಇಲಾಖೆಯ ಐದು ಜನರನ್ನೊಳಗೊಂಡ ತಂಡ ಕೊಮಿಂಗ್ ಕಾರ್ಯಾಚರಣೆ ನಡೆಸುತ್ತಿದೆ.
ಸೋಮವಾರದಿಂದ ಈವರೆಗೆ ಹಲವು ಬಾರಿ ಶಿರವಾಡದ ಜಾಂಬಾ ಗ್ರಾಮದ ಅರಣ್ಯ ವ್ಯಾಪ್ತಿಯ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ. ಕಾರವಾರದಲ್ಲಿ ಕೈಗಾ ಅಣುಸ್ತಾವರ, ನೌಕಾ ದಳದ ಕೇಂದ್ರವಿದ್ದು, ಇದರ ಭದ್ರತಾ ದೃಷ್ಟಿಯಿಂದ ಟ್ರ್ಯಾಕ್ ಆದ ನಿರ್ಬಂಧಿತ ಸ್ಯಾಟಲೈಟ್ ಫೋನ್ ಯಾರು ಬಳಕೆ ಮಾಡುತಿದ್ದಾರೆ ಎಂಬ ಬಗ್ಗೆ ತನಿಖೆ ಚುರುಕು ಗೊಳಿಸಲಾಗಿದೆ. ಟ್ರ್ಯಾಕ್ ಆದ ಅರಣ್ಯ ವ್ಯಾಪ್ತಿಯಲ್ಲಿ ಕೂಮಿಂಗ್ ಕಾರ್ಯಾಚರಣೆ ಮುಂದುವರೆದಿದೆ. ಇನ್ನು ಜಿಲ್ಲೆಯಲ್ಲಿ ಪದೇ ಪದೆ ಸ್ಯಾಟಲೈಟ್ ಫೋನ್ ಟ್ರ್ಯಾಕ್ ಆಗುತಿದ್ದು, ಸಿದ್ದಾಪುರ, ಕಾರವಾರ, ಯಲ್ಲಾಪುರ ಭಾಗದಲ್ಲಿ ಸಹ ಈ ಹಿಂದೆ ಹತ್ತಕ್ಕೂ ಹೆಚ್ಚುಬಾರಿ ಟ್ರ್ಯಾಕ್ ಆಗಿದೆ.
Advertisement
Advertisement
ಇದೇ ಮೊದಲಲ್ಲ
ಉತ್ತರ ಕನ್ನಡದಿಂದ ಸ್ಯಾಟಲೈಟ್ ಕರೆ ಹೋದ ಮಾಹಿತಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಕರೆಯ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆದಿದೆ. 2019ರ ಸೆಪ್ಟೆಂಬರ್‍ನಲ್ಲಿ ಕೈಗಾ ಸಮೀಪದ ಕಾಡಿನಿಂದ ಸ್ಯಾಟಲೈಟ್ ಕರೆ ಹೋದ ಬಗ್ಗೆ ಮಾಹಿತಿ ಇದ್ದ ಕಾರಣ, ಅದನ್ನು ಹುಡುಕಲು ಹೋದ ಕಾರವಾರ ಡಿವೈಎಸ್‍ಪಿ ಶಂಕರ್ ಮಾರಿಹಾಳ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಕಾಡು ಪ್ರಾಣಿ ನೋಡಿ ಭಯಗೊಂಡ ಅವರು ಒಂದು ರಾತ್ರಿ ಕಾಡಿನಲ್ಲೇ ಕಳೆದು ಮರುದಿನ ಬೆಳಗ್ಗೆ ಮರಳಿದ್ದರು.
Advertisement
Advertisement
ತಿಂಗಳ ಹಿಂದೆ ಮಾಜಾಳಿ ಕಡಲ ತೀರದಿಂದ ಸ್ಯಾಟಲೈಟ್ ಕರೆ ಹೋದ ಬಗ್ಗೆ ಮಾಹಿತಿ ಬಂದಿತ್ತು. ಕಳೆದ ವರ್ಷ ಸಿದ್ದಾಪುರ ತಾಲೂಕಿನ ನಿಲ್ಕುಂದ ಸಮೀಪದಿಂದ ಸ್ಯಾಟಲೈಟ್ ಕರೆ ಹೋದ ಮಾಹಿತಿ ಸಿಕ್ಕಿತ್ತು. ಭಟ್ಕಳದ ಐಎಸ್‍ಡಿ ಅಧಿಕಾರಿಗಳು ತೆರಳಿ ಸ್ಥಳೀಯರನ್ನು ವಿಚಾರಣೆಗೊಳಪಡಿಸಿದ್ದರು. ಕಾರವಾರ ಬಂದರು ಸಮೀಪ ಎರಡು ಮೂರು ಬಾರಿ ಸ್ಯಾಟಲೈಟ್ ಕರೆಯ ಸುಳಿವು ಸಿಕ್ಕಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಇದುವರೆಗೂ ಯಾವುದೇ ಶಂಕಿತರೂ ಪತ್ತೆಯಾಗಿಲ್ಲ.
ಏನಿದು ಸ್ಯಾಟಲೈಟ್ ಕರೆ?
ಸ್ಥಳೀಯ ದೂರ ಸಂಪರ್ಕ ಕಂಪನಿಗಳ ಸಂಪರ್ಕ ಜಾಲದ ಸಹಕಾರವಿಲ್ಲದೇ ನೇರವಾಗಿ ಉಪಗ್ರಹ ಸಹಾಯದಿಂದ ಕರೆ ಮಾಡಬಹುದಾದ ಸಾಧನಕ್ಕೆ ಸ್ಯಾಟಲೈಟ್ ಫೋನ್ ಎನ್ನಲಾಗುತ್ತದೆ. ಇದರಿಂದ ಮಾಡುವ ಕರೆ ಹೆಚ್ಚು ವೆಚ್ಚದಾಯಕವಾಗಿದೆ. ಇದನ್ನು ಸಾಮಾನ್ಯ ಜನರು ಬಳಸುವುದು ಕಡಿಮೆ. ಭಾರತದಲ್ಲಿ ಕೇಂದ್ರೀಯ ದೂರ ಸಂಪರ್ಕ ಇಲಾಖೆಯ ಅನುಮತಿಯೊಂದಿಗೆ ಲಿಮರ್‍ಸೆಟ್ ಎಂಬ ಸ್ಯಾಟಲೈಟ್ ಫೋನ್‍ನ್ನು ಬಳಕೆ ಮಾಡಲು ಅನುಮತಿ ಇದೆ. ವಿಮಾನ ಹಾಗೂ ರೈಲಿನಲ್ಲಿ ಪ್ರಯಾಣಿಸುವಾಗ ಫೋನ್ ಕೊಂಡೊಯ್ಯಲು ವಿಶೇಷ ಅನುಮತಿ ಪತ್ರವೂ ಬೇಕು. ತುರಾಯಾ, ಇರೀಡಿಯಂ ಮುಂತಾದ ಕಂಪನಿಗಳ ಸ್ಯಾಟಲೈಟ್ ಫೋನ್ ಬಳಕೆ ಈ ಹಿಂದೆ ದೇಶದಲ್ಲಿತ್ತು.
2011ರ ಮುಂಬೈ ದಾಳಿಯ ನಂತರ 2012ರಲ್ಲಿ ಈ ಕಂಪನಿಗಳ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಸಂಬಂಧ ಡಿಜಿ ಶಿಪ್ಪಿಂಗ್ ಕೂಡ ವಿಶೇಷ ಆದೇಶ ಹೊರಡಿಸಿದೆ. ಉಗ್ರಗಾಮಿಗಳು, ಭೂಗತ ಪಾತಕಿಗಳು ಸ್ಥಳೀಯ ಭದ್ರತಾ ವ್ಯವಸ್ಥೆಯ ಕಣ್ಣು ತಪ್ಪಿಸಿ ಇದನ್ನು ಬಳಸುತ್ತವೆ ಎಂಬ ಅನುಮಾನದಿಂದ ಈ ಕರೆಯ ಬಗ್ಗೆ ದೇಶದ ಎಲ್ಲ ಭದ್ರತಾ ವಿಭಾಗಗಳು ವಿಶೇಷ ಗಮನ ನೀಡುತ್ತವೆ.
ಜಿಲ್ಲೆಯಲ್ಲಿ ಆತಂಕ ಏಕೆ?
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ ಹಲವು ಅಣೆಕಟ್ಟುಗಳು, ವಾಣಿಜ್ಯ ಬಂದರನ್ನು ಹೊಂದಿದೆ. ದಟ್ಟ ಕಾಡೂ ಇರುವುದರಿಂದ ವಿಚ್ಛಿದ್ರಕಾರಿ ಶಕ್ತಿಗಳು ಇಲ್ಲಿ ಅಟ್ಟಹಾಸ ಮೆರೆಯುವ ಸಾಧ್ಯತೆ ಇದೆ. ಇದರಿಂದ ಉತ್ತರ ಕನ್ನಡದ ಸ್ಯಾಟಲೈಟ್ ಕರೆಗಳ ಬಗ್ಗೆ ಭದ್ರತಾ ಸಂಸ್ಥೆಗಳು ಹೆಚ್ಚಿನ ಗಮನ ನೀಡುತ್ತವೆ. ಭಟ್ಕಳದಲ್ಲಿ ಇಂಥ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಲು ಐಎಸ್‍ಡಿ ಪ್ರತ್ಯೇಕ ವಿಭಾಗವನ್ನು ಕೇಂದ್ರ ಸರ್ಕಾರ ಇರಿಸಿದೆ. ನೌಕಾ ದಳದ ಗುಪ್ತ ಇಲಾಖೆ ಸಹ ಇದರ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುತ್ತದೆ.
ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಕಾರವಾರ ಅತೀ ಮುಖ್ಯ ಪ್ರದೇಶವಾಗಿದೆ. ಈ ಹಿನ್ನಲೆಯಲ್ಲಿ ಕಾರವಾರದಲ್ಲಿ ರಾಷ್ಟ್ರೀಯ ಭದ್ರತಾ ದಳ, ಕೇಂದ್ರ ಇಂಟಲಿಜನ್ಸಿಗಳು ಸ್ಯಾಟಲೈಟ್ ಮೂಲಕವೂ ಇಲ್ಲಿನ ಆಗುಹೊಗುಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುತ್ತವೆ. ಕಾರವಾರದ ನೌಕಾನೆಲೆ ಉಗ್ರಗಾಮಿಗಳ, ವಿರೋಧಿ ರಾಷ್ಟ್ರಗಳ ಮುಖ್ಯ ಟಾರ್ಗೆಟ್ ಸಹ ಆಗಿದ್ದು, ಇಲ್ಲಿನ ರಹಸ್ಯಗಳು ಭದ್ರತೆಗಳ ಮಾಹಿತಿ ವೈರಿಗಳಿಗೆ ಸಿಗದಂತೆ ಕಾಪಾಡುವುದು ಅತ್ಯವಶ್ಯ. ಇದಲ್ಲದೇ ವೈರಿಗಳು ದಾಳಿ ನಡೆಸದಂತೆ ತಡೆಯಲು ಸಿದ್ಧವಿರಬೇಕಿದ್ದು, ಮುಂಬೈನಲ್ಲಿ ದಾಳಿ ನಡೆಸಿದಂತೆ ಇಲ್ಲಿಯೂ ದಾಳಿ ನಡೆಯುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕಟ್ಟೆಚ್ಚರ ವಹಿಸುವುದು ಅನಿವಾರ್ಯವಾಗಿದೆ.
ರಕ್ಷಣಾ ಸಿಬ್ಬಂದಿಗೆ ತಾಂತ್ರಿಕ ಸಮಸ್ಯೆ!
ಆಂತರಿಕಾ ಭದ್ರತಾ ಸಿಬ್ಬಂದಿ ಹೇಳುವಂತೆ ಸ್ಯಾಟಲೈಟ್ ಸಿಗ್ನಲ್ ಟ್ರ್ಯಾಕ್ ಆದಾಗ ತಕ್ಷಣ ಕಾರ್ಯೋನ್ಮುಖವಾಗಬೇಕಾಗುತ್ತದೆ. ಆದರೆ ಕಾರವಾರದಲ್ಲಿ ಬಂದರು ಇದೆ. ಇಲ್ಲಿ ಬರುವ ಅಂತರಾಷ್ಟ್ರೀಯ ಹಡಗುಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲೋ ಬಳಸಿದ ಸಿಗ್ನಲ್ ಮತ್ತೆಲ್ಲೋ ಟ್ರ್ಯಾಕ್ ಆಗುವ ಸಮಸ್ಯೆಗಳು ಸಹ ಇದೆ. ಇದು ಪತ್ತೆ ಹಚ್ಚುವಲ್ಲಿ ವಿಘ್ನ ತಂದೊಡ್ಡುತ್ತದೆ, ಅದಲ್ಲದೆ ಕೆಲವು ಖಾಸಗಿ ವಿಮಾನಗಳಲ್ಲಿ ಸ್ಯಾಟಲೈಟ್ ಫೋನ್ ಬಳಸುವುದರಿಂದ ಈ ಭಾಗದಲ್ಲಿ ಹಾರಾಡಿದ ವಿಮಾನದ ಸಿಗ್ನಲ್ ಟ್ರ್ಯಾಕ್ ಆಗುತ್ತದೆ. ಹೀಗಾಗಿ ಇಂತಹದ್ದೇ ಎಂದು ಹುಡುಕುವುದು ಕಷ್ಟವಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ವಿವಿಧ ಭಾಗದಲ್ಲಿ 10ಕ್ಕೂ ಹೆಚ್ಚುಬಾರಿ ಸ್ಯಾಟಲೈಟ್ ಫೋನ್ ಟ್ರ್ಯಾಕ್ ಆಗಿದ್ದು, ಈ ವರೆಗೆ ಯಾವ ಮೂಲ ಎಂಬುದು ಪತ್ತೆಯಾಗಿಲ್ಲ.