ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಎರಡನೇ ಅಂತಾರಾಷ್ಟ್ರೀಯ ಕ್ರೀಡಾಂಗಣ ತಲೆ ಎತ್ತಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕೆ.ಎಸ್.ಸಿ.ಎ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಸಂತೋಷ್ ಮೇನನ್ ಅವರನ್ನು ಅವರ ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸದ್ಯ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕಾಗಿ ಕಾರವಾರ-ಗೋವಾ ಗಡಿ ಭಾಗದ ಕಾಳಿನದಿ ಅರಬ್ಬಿ ಸಮದ್ರ ಸೇರುವ ಸಂಗಮ ಸ್ಥಳವಾದ ಸದಾಶಿವಗಡ್‍ನಲ್ಲಿ 12 ಎಕರೆ ಜಮೀನನನ್ನು ನಿಗದಿ ಮಾಡಲಾಗಿದ್ದು, ಪ್ರಸಕ್ತ ಬಜೆಟ್‍ನಲ್ಲಿ ಅನುಮೋದನೆ ಪಡೆದು ಕಾರ್ಯ ಪ್ರಾರಂಭಿಸಲಾಗುತ್ತದೆ.
Advertisement
Advertisement
ಇಲ್ಲಿಯೇ ಯಾಕೆ?
ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣವಿದೆ. ಅದನ್ನು ಹೊರತುಪಡಿಸಿದರೆ ಜಿಲ್ಲೆಯ ಮಟ್ಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮೊದಲು ಪ್ರಸ್ತಾಪ ಮಾಡಲಾಗಿದೆ. ಇದಕ್ಕೆ ಕಾರಣ ಇಲ್ಲಿನ ಪರಿಸರ. ಹೌದು ಕಾರವಾರ ನೈಸರ್ಗಿಕವಾಗಿ ಅದ್ಭುತ ಪ್ರದೇಶವಾಗಿದೆ. ಜೊತೆಗೆ ಗೋವಾ ರಾಜ್ಯ ಕೂಡ ಸಮೀಪದಲ್ಲಿಯೇ ಇದೆ. ರಾಷ್ಟ್ರ ಕವಿ ರವೀಂದ್ರನಾಥ ಠಾಗೂರ್ ರವರಿಗೆ ಗೀತಾಂಜಲಿ ಕವನ ಸಂಕಲನ ಬರೆಯಲು ಸ್ಫೂರ್ತಿ ನೀಡಿದ ಹಾಗೂ ಅವರಿಂದ ಬಾಯಿತುಂಬಾ ಕರ್ನಾಟಕದ ಕಾಶ್ಮೀರ ಎಂದು ಹೊಗಳಿಸಿಕೊಂಡ ಪ್ರದೇಶವು ಇದೇ ಕಾರವಾರದ ಸಮುದ್ರ ತೀರ.
Advertisement
Advertisement
ಒಂದೆಡೆ ಕಾಳಿ ನದಿ, ಇನ್ನೊಂದೆಡೆ ಅರಬ್ಬಿ ಸಮುದ್ರ ಇದರ ಸಂಗಮವಾಗುವುದೇ ಕಾರವಾರದ ಸದಾಶಿವಗಡದಲ್ಲಿ. ಇಲ್ಲಿಯೇ ರಾಜ್ಯ ಸರ್ಕಾರ 12 ಎಕರೆ ವಿಸ್ಥಾರವಾದ ಜಾಗವನ್ನು ಕಾಯ್ದಿರಿಸಿದೆ. ಆರು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ, ಉಳಿದ ಆರು ಎಕರೆ ಪ್ರದೇಶದಲ್ಲಿ ಪಾರ್ಕಿಂಗ್, ಕಚೇರಿ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲು ನಿರ್ಧಾರ ಮಾಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಅನುಮೋದನೆ ಪಡೆದು 2030ರ ವೇಳೆಗೆ ಕಾರ್ಯಾರಂಭ ಮಾಡುವ ಉದ್ದೇಶ ಸರ್ಕಾರದ್ದಾಗಿದೆ. ಸದ್ಯ ಈ ಕ್ರೀಡಾಂಗಣಕ್ಕೆ ಸಂಪರ್ಕ ಸಾಧಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪತ ಕಾಮಗಾರಿ ಪೂರ್ಣವಾಗುತ್ತಿದೆ.
ಅಂಕೋಲದಲ್ಲಿ ನೌಕಾದಳದ ಸಹ ಭಾಗಿತ್ವದ ನಾಗರೀಕ ವಿಮಾನ ನಿಲ್ದಾಣ ಪ್ರಸ್ಥಾಪ ಜಾರಿಯಾಗುವ ಸಾಧ್ಯತೆಗಳಿವೆ. ಕಾರವಾರದಿಂದ ಗೋವಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ 70 ಕಿಲೋಮೀಟರ್ ಅಂತರವಿದ್ದರೆ, ಅಂತಾರಾಷ್ಟ್ರೀಯ ಮಾದರಿಯ ಹೋಟೆಲ್‍ಗಳು 40ರಿಂದ 50 ಕಿಮೀ ವ್ಯಾಪ್ತಿಯಲ್ಲಿದ್ದು ಆಟಗಾರರು, ಅಂತಾರಾಷ್ಟ್ರೀಯ ಅತಿಥಿಗಳಿಗೆ ಉಳಿದುಕೊಳ್ಳಲು ಉತ್ತಮ ಅವಕಾಶ ಹಾಗೂ ವ್ಯವಸ್ಥೆಗಳಿವೆ. ಇದಲ್ಲದೇ ಜನರಿಗೆ ಸಂಚರಿಸಲು ಕೊಂಕಣ ರೈಲ್ವೆ ಮಾರ್ಗ ಸಹ ಉತ್ತಮವಾಗಿದ್ದು ರಾಜ್ಯ ಮತ್ತು ಹೊರ ರಾಜ್ಯದ ನಾನಾ ಭಾಗದಿಂದ ಇಲ್ಲಿಗೆ ಬರಲು ರೈಲ್ವೆ ವ್ಯವಸ್ಥೆ ಸಹ ಇದೆ. ಶೀಘ್ರದಲ್ಲೇ ಹುಬ್ಬಳ್ಳಿ ಅಂಕೋಲ ಭಾಗಕ್ಕೂ ರೈಲ್ವೇ ಮಾರ್ಗ ಮಾಡಲು ಸಿದ್ಧತೆ ನಡೆದಿದೆ.
ಜಿಲ್ಲೆಯ ಅಭಿವೃದ್ಧಿಗೆ ಪೂರಕ
ಕಾರವಾರ ನೈಸರ್ಗಿಕ ಸಂಪತ್ಬರಿತ ತಾಲೂಕಾಗಿದ್ದರೂ ಅತೀ ಹಿಂದುಳಿದ ಅಭಿವೃದ್ಧಿ ಕಾಣದ ತಾಲೂಕಿನಲ್ಲಿ ಇದು ಒಂದಾಗಿದೆ. ಮೀನುಗಾರಿಕೆ ಇಲ್ಲಿನ ಮುಖ್ಯ ಕಸಬು. ಆದರೇ ಈ ಪ್ರದೇಶದಲ್ಲಿ ದೊಡ್ಡ ಕಾರ್ಖಾನೆಯಾಗಲಿ, ಕಂಪನಿಗಳಾಗಲಿ ಇಲ್ಲ. ಇಲ್ಲಿನ ಜನರು ಉದ್ಯೋಗಕ್ಕಾಗಿ ನೆರೆಯ ಗೋವಾವನ್ನು ಅವಲಂಬಿಸಿದ್ದಾರೆ. ಪ್ರವಾಸೋದ್ಯಮ ಉತ್ತಮ ಅವಕಾಶ ಇದ್ದರೂ ಸಹ ಏಷ್ಯಾದ ಅತಿದೊಡ್ಡ ನೌಕಾ ನೆಲೆಯಾದ ಕದಂಬ ನೌಕಾ ನೆಲೆಗಾಗಿ ಸಮುದ್ರ ಭಾಗದ ತೀರ ಪ್ರದೇಶ ಸೇರಿದಂತೆ ಹಲವು ಭಾಗವನ್ನು ದೇಶದ ಹಿತಕ್ಕಾಗಿ ದಾರೆ ಎರೆದಿದ್ದಾರೆ.
ಇಂತಹ ಸ್ಥಿತಿಯಲ್ಲಿ ಪ್ರವಾಸೋದ್ಯಮ ಅವಕಾಶ ಸಹ ಕ್ಷೀಣಿಸಿತ್ತು. ಆದರೇ ಕಳೆದ ಹತ್ತು ವರ್ಷಗಳಲ್ಲಿ ಕಾರವಾರ ಭಾಗ ಸಾಕಷ್ಟು ಬದಲಾವಣೆಯಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಇಲ್ಲಿನ ಜನರು ಪ್ರವಾಸೋದ್ಯಮದಲ್ಲಿ ಉದ್ಯೋಗ ಹುಡುಕಿಕೊಂಡಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಕ್ರೀಡಾಂಗಣವಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಟಿ ಸಹ ಆಗಲಿದೆ. ಅಂತಾರಾಷ್ಟ್ರೀಯ ಮನ್ನಣೆಯ ಜೊತೆ ನೆರೆಯ ಗೋವಾದಂತೆ ಕಾರವಾರವೂ ಅಭಿವೃದ್ಧಿಯಾಗಲಿದೆ.