– ಬಿಎಸ್‍ಎನ್‍ಎಲ್‍ನಿಂದ ಮಹಾ ಪ್ರಮಾದ
– ಕನ್ನಡ ಸಂಘಟನೆಗಳ ಆಕ್ರೋಶ
ಕಾರವಾರ: ಬೆಳಗಾವಿ, ನಿಪ್ಪಾಣಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿ ಇತ್ತೀಚೆಗೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಆದರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಕಾರವಾರವನ್ನು ಈಗಾಗಲೇ ಮಹಾರಾಷ್ಟ್ರಕ್ಕೆ ಸೇರಿಸುವ ಮೂಲಕ ಕಾರವಾರದ ತನ್ನ ಗ್ರಾಹಕರಿಗೆ ‘ವೆಲ್ ಕಮ್ ಟು ಮಹಾರಾಷ್ಟ್ರ’ ಎಂಬ ಸಂದೇಶ ರವಾನಿಸಿ ಕೆಣಕಿದೆ.
ಯಾವುದೇ ಕಂಪನಿಯ ನೆಟ್‍ವರ್ಕ್ ಇರಲಿ ಗ್ರಾಹಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಿದಾಗ ಆ ರಾಜ್ಯಕ್ಕೆ ಸ್ವಾಗತ ಎಂಬುದಾಗಿ ಸಂದೇಶ ಬರುವುದು ಸಾಮಾನ್ಯ. ಆದರೆ ಕರ್ನಾಟಕದ ಗಡಿ ಜಿಲ್ಲೆಯಾದ ಉತ್ತರಕನ್ನಡದ ಕಾರವಾರಕ್ಕೆ ಬಂದರೆ ಸಾಕು ನಿಮ್ಮ ಮೊಬೈಲಿಗೆ ʼವೆಲ್ ಕಮ್ ಟು ಮಹಾರಾಷ್ಟ್ರʼ ಎಂಬ ಸಂದೇಶ ಬರುತ್ತದೆ.
Advertisement
Advertisement
ಕಾರವಾರ ನಗರ, ಸೇಜಾವಾಡ, ಶಿರವಾಡ, ಆಸ್ನೋಟಿ ಸೇರಿದಂತೆ ಹಲವು ಭಾಗದಲ್ಲಿ ಬಿಎಸ್‍ಎನ್‍ಎಲ್ ಗ್ರಾಹಕರು ತಮ್ಮ ಮೊಬೈಲ್ ತೆಗೆದುಕೊಂಡು ಹೋದರೆ ಇದೇ ಸಂದೇಶ ಬರುತ್ತಿದೆ. ಇದರಿಂದಾಗಿ ದೊಡ್ಡ ವಿವಾದ ಸೃಷ್ಟಿಯಾಗಿದ್ದು ಮೆಸೇಜ್ ಬರುತ್ತಿರುವುದಕ್ಕೆ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
Advertisement
ಈ ಬಗ್ಗೆ ಪಬ್ಲಿಕ್ ಟಿವಿಗೆ ಬಿಎಸ್‍ಎನ್‍ಎಲ್ ಉಪ ಮಹಾ ಪ್ರಬಂಧಕರಾದ ರಾಜೇಶ್ವರಿ ಜಿಎಂ ಪ್ರತಿಕ್ರಿಯಿಸಿದ್ದು, ಈ ವಿಷಯ ನಮ್ಮ ಗಮನಕ್ಕೂ ಬಂದಿದೆ. ನೆಟ್‍ವರ್ಕ್ ಸಮಸ್ಯೆ ಇದ್ದ ಕಾರಣ ಅಪ್‍ಗ್ರೇಡ್ ಮಾಡುವ ಕೆಲಸವನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಲೋಪವಾಗಿದೆ. ಈ ಕುರಿತು ಬೆಂಗಳೂರಿನ ಕೇಂದ್ರ ಕಚೇರಿಗೆ ತಿಳಿಸಲಾಗಿದೆ. ಆ ಸಂದೇಶ ಬಾರದಂತೆ ಕ್ರಮ ವಹಿಸಲಾಗಿದೆ ಎಂದಿದ್ದಾರೆ.
Advertisement
ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಹೋಯಿತು ಎಂಬಂತೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹೇಳಿಕೆಯ ಬೆನ್ನಲ್ಲೇ ಕಾರವಾರದಲ್ಲಿ ಮಹಾರಾಷ್ಟ್ರಕ್ಕೆ ಸ್ವಾಗತ ಎಂದು ಬಿಎಸ್‌ಎನ್‌ಎಲ್ ಕಳುಹಿಸುತ್ತಿರುವುದು ಕನ್ನಡಿಗರಿಗೆ ಸ್ವಾಭಿಮಾನ ಕೆರಳುವಂತೆ ಮಾಡಿದೆ.