ಚಿಕ್ಕಮಗಳೂರು: ಕಾಫಿನಾಡಿನ ಕಾಫಿಯ ಘಮಲನ್ನ ವಿಶ್ವವ್ಯಾಪ್ತಿ ಹರಡಿಸಿ ಖ್ಯಾತಿ ಗಳಿಸಿದ್ದ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆಗೆ ಶರಣಾಗಿ ಇಂದಿಗೆ ಒಂದು ವರ್ಷ. ಅವರ ಅಗಲಿಕೆಯನ್ನ ಇಂದಿಗೂ ಮರೆಯಲಾಗದ ಅವರ ಅಭಿಮಾನಿಗಳು ಅವರ ನೆನಪಿನಾರ್ಥ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಸಮೀಪದ ಭಾವನಿ ಎಸ್ಟೇಟ್‍ನಲ್ಲಿ ಅವರ ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದೇ ವೇಳೆ ಮಾತನಾಡಿದ ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಸಿದ್ಧಾರ್ಥ್ ಅವರ ಅಭಿಮಾನಿ ಹಾಲಪ್ಪ ಗೌಡ, ಅವರು ನಮ್ಮನ್ನ ಅಗಲಿರಬಹುದು. ಆದರೆ ನಾಡಿನ ಕೊಟ್ಯಂತರ ಮನೆ-ಮನಗಳಲ್ಲಿ ಅವರು ಎಂದೆಂದಿಗೂ ಅಜರಾಮರ. ನೀವು ಆತ್ಮವನ್ನ ಬಿಟ್ಟಿದ್ದರೂ ನಮಗೆಲ್ಲಾ ಆತ್ಮಸ್ಥೈರ್ಯವನ್ನ ತುಂಬಿ ಹೋಗಿದ್ದೀರಾ. ನೀವು ನಮ್ಮೊಂದಿಗೆ ಸದಾ ಇರುತ್ತೀರಾ. ಮತ್ತೆ ಹುಟ್ಟಿ ಬನ್ನಿ ಎಂದು ಪಾರ್ಥಿಸಿದ್ದಾರೆ.
Advertisement
Advertisement
1996ರಲ್ಲಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ದ ಸಿದ್ಧಾರ್ಥ್, ಒಂದು ನೂರಾಗಿ, ನೂರು ಐನೂರಾಗಿ ವಿಶ್ವದಾದ್ಯಂತ 10ಕ್ಕೂ ಹೆಚ್ಚು ದೇಶಗಳಲ್ಲಿ 1772 ಕಾಫಿ ಡೇ ಔಟ್ ಲೇಟ್‍ನ ಮಾಲೀಕರಾಗಿದ್ದರು. ವಾರ್ಷಿಕ ಸಾವಿರಾರು ಟನ್ ಕಾಫಿ ರಪ್ತು ಮಾಡುವ ಮೂಲಕ ಜಗತ್ತನ್ನೇ ಕರ್ನಾಟಕದತ್ತ ತಿರುಗಿ ನೋಡಿಸಿದ್ದು ಸಿದ್ಧಾರ್ಥ್ ಹೆಗ್ಡೆ ಹೆಗ್ಗಳಿಕೆ. ಕಾಫಿಯ ಜೊತೆ ಹತ್ತಕ್ಕೂ ಹೆಚ್ಚು ವಿವಿಧ ಕಂಪನಿಗಳನ್ನ ಆರಂಭಿಸಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ನಡೆದಾಡುವ ದೈವವೂ ಆಗಿದ್ದರು. ಹಸಿರ ಪ್ರೇಮಿ ಸಿದ್ಧಾರ್ಥ್ ಹೆಗ್ಡೆ, ಉಳಿಸೋದೆ ಹಸಿರು. ಹಸಿರನ್ನ ಬೆಳೆಸಿ ಎಂದು ಎಲ್ಲರಿಗೂ ಹೇಳುತ್ತಿದ್ದರು ಎಂದು ಅವರ ಅಭಿಮಾನಿಗಳು ಅವರನ್ನ ನೆನೆದು ಕಣ್ಣೀರಿಟ್ಟರು.
Advertisement
Advertisement
ಅಪ್ಪನ ಬಳಿ ಎರಡು ಲಕ್ಷ ಪಡೆದು ಮುಂಬೈನಲ್ಲಿ ಬ್ಯಸಿನೆಸ್ ಆರಂಭಿಸಿದ್ದ ಸಿದ್ಧಾರ್ಥ್ ನಷ್ಟವಾದ ಬಳಿಕ ಅಪ್ಪನ ಬಳಿ ಮತ್ತೆ ಹಣ ಕೇಳಿದ್ದರು. ಅಪ್ಪ ಎರಡು ಲಕ್ಷ ಹಣ ಹಾಳು ಮಾಡಿದ್ದೀಯಾ ಎಂದು ಬ್ಯಾಂಕಿನಲ್ಲಿ ಸಾಲ ಮಾಡಿ ಜೊತೆಗೆ ಕಾಫಿ ತೋಟವನ್ನ ಮಾರಿ ಐದು ಲಕ್ಷ ಹಣ ನೀಡಿದ್ದರು. ಅಲ್ಲಿಂದ ಸಿದ್ಧಾರ್ಥ್ ಹೆಗ್ಡೆ ಮತ್ತೆಂದೂ ಹಿಂದೆ ತಿರುಗಿ ನೋಡಿರಲಿಲ್ಲ. ಆ ಹಣ ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು. ಆದರೆ ದೇಶ-ವಿದೇಶಗಳಲ್ಲಿ ಕಾಫಿನಾಡ ಕಾಫಿಯ ಘಮಲನ್ನ ಪಸರಿಸಿದ್ದ ಕಾಫಿಯ ಹರಿಕಾರ ವಿಧಿಯ ಕರೆಗೆ ಓಗೊಟ್ಟು ನಮ್ಮನ್ನ ಅಗಲಿ ಇಂದಿಗೆ ಒಂದು ವರ್ಷವಾಯಿತು ಎಂದು ಬೆಳೆಗಾರರು ಹಾಗೂ ಅಭಿಮಾನಿಗಳು ಭಾವುಕರಾದರು.
ಅವರಿಂದ ಸಹಾಯ ಪಡೆದವರು ಅವರ ಋಣ ತೀರಿಸಲು ಅಸಾಧ್ಯ ಎಂದಿದ್ದಾರೆ. ಅಂತಹ ಅಪ್ರತಿಮ ವ್ಯಕ್ತಿತ್ವದ ಸಿದ್ಧಾರ್ಥ್ ಹೆಗ್ಡೆಗೆ ಇಂದು ಅವರ ಅಭಿಮಾನಿಗಳು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿ ಶಿಲಾನ್ಯಾಸ ನೆರವೇರಿಸಿ, ಎರಡರಿಂದ ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣವಾಗುತ್ತೆ ಎಂದರು.
ಕಾರ್ಯಕ್ರಮದಲ್ಲಿ ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪ ಗೌಡ, ತೀರ್ಥಹಳ್ಳಿ ರತ್ನಾಕರ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಒಕ್ಕಲಿಗರ ಸಂಘದ ನಿರ್ದೇಶಕ ಮುಗ್ರವಳ್ಳಿ ಪ್ರದೀಪ್, ದುಂದುಗ ಸುಬ್ಬೇಗೌಡ್ರು ಸೇರಿದಂತೆ ಕಾಫಿ ಬೆಳೆಗಾರರ ಸಂಘ ಹಾಗೂ ಒಕ್ಕಲಿಗರ ಸಂಘದ ಮುಖಂಡರು ಪಾಲ್ಗೊಂಡು ಅವರ ಪ್ರತಿಮೆ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.