ಚಿಕ್ಕಮಗಳೂರು: ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ನಟ ದರ್ಶನ್ ಜಿಲ್ಲೆಯ ಮುತ್ತೋಡಿ ಅರಣ್ಯಕ್ಕೆ ಭೇಟಿ ನೀಡಿ, ಶುಕ್ರವಾರ ಅರಣ್ಯ ವಲಯದಲ್ಲೇ ತಂಗಿದ್ದು ಇಂದು ಮಧ್ಯಾಹ್ನ ಬೆಂಗಳೂರಿಗೆ ಹಿಂದಿರುಗಿದ್ದಾರೆ.
ಸ್ನೇಹಿತರ ಜೊತೆ ಶುಕ್ರವಾರ ಸಂಜೆ ಬಂದ ದರ್ಶನ್ ಸಿಗೇಖಾನ್ ಅರಣ್ಯ ವಿಶ್ರಾಂತಿ ಧಾಮದಲ್ಲಿ ವಾಸ್ತವ್ಯ ಹೂಡಿ ಮುತ್ತೋಡಿ ಅರಣ್ಯದ ಸೌಂದರ್ಯವನ್ನು ಸವಿದರು. ಶುಕ್ರವಾರ ಸಂಜೆ ಬಂದು ಮುತ್ತೋಡಿಯಲ್ಲಿ ವಾಸ್ತವ್ಯ ಹೂಡಿದ ದರ್ಶನ್, ಇಂದು ಬೆಳಗ್ಗೆ ಮುತ್ತೋಡಿ ಅರಣ್ಯ ವಲಯದಲ್ಲಿ ಸಫಾರಿ ಮಾಡಿದ್ದಾರೆ.
ಸುಮಾರು 25 ಸಾವಿರ ಹೆಕ್ಟರ್ ಗೂ ಅಧಿಕ ವಿಸ್ತಾರದ ಮುತ್ತೋಡಿ ಅರಣ್ಯದಲ್ಲಿ ನಿಸರ್ಗದತ್ತವಾದ ನೋಡುವ ತಾಣಗಳಿವೆ. ಇಂದು ಬೆಳಗ್ಗೆ ಸಫಾರಿ ಹೊರಟ ದರ್ಶನ್ ಕೆಸವೆ, ಗೇಮ್ ರೌಂಡ್, 300 ವರ್ಷಕ್ಕೂ ಅಧಿಕ ಆಯಸ್ಸಿನ ದೊಡ್ಡ ಸಾಗುವಾನಿ ಮರ, ಇಪ್ಳ ಸೇರಿದಂತೆ ಕೆಲ ಸುಂದರ ತಾಣಗಳಿಗೆ ಭೇಟಿ ನೀಡಿದ್ದರು. ಜೊತೆಗೆ ಪ್ರಾಣಿ, ಪಕ್ಷಿಗಳ ವೀಕ್ಷಣೆಗೆ ಸಫಾರಿ ಹೋಗಿ ಬಂದಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ದರ್ಶನ್‍ಗೆ ಮುತ್ತೋಡಿ ಅರಣ್ಯದ ವಲಯ ಅರಣ್ಯಾಧಿಕಾರಿ ಲೋಕೇಶ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಇದೇ ವೇಳೆ, ನೆಚ್ಚಿನ ನಟನನ್ನು ಕಂಡ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದರ್ಶನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.