ಚಿಕ್ಕಮಗಳೂರು/ಮಂಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಇಡೀ ರಾತ್ರಿ ಮಳೆ ಸುರಿದಿದೆ. ಸಂಜೆ ಆರಂಭವಾದ ತುಂತುರು ಮಳೆ ಇಡೀ ರಾತ್ರಿ ಧಾರಾಕಾರವಾಗಿ ಸುರಿದಿರೋದ್ರಿಂದ ಕಳೆದ ವರ್ಷದ ಸ್ಥಿತಿ ನೆನೆದು ಮಲೆನಾಡಿಗರು ಕಂಗಾಲಾಗಿದ್ದಾರೆ.
ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ವರುಣದೇವ ಬುಧವಾರ ರಾತ್ರಿ ಅಬ್ಬರಿಸಿದ್ದಾನೆ. ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್. ಪುರ ತಾಲೂಕಿನಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದೆ. ಕಳಸ ಹಾಗೂ ಬಾಳೆಹೊನ್ನೂರಿನಲ್ಲೂ ಭಾರೀ ಮಳೆ ಸುರಿದಿದೆ.
Advertisement
Advertisement
ನಿನ್ನೆ ಬೆಳಗ್ಗಿನಿಂದಲೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ತಣ್ಣನೆಯ ಗಾಳಿಯೊಂದಿಗೆ ಮೋಡಕವಿದ ವಾತಾವರಣವಿತ್ತು. ಸಂಜೆಯಿಂದಲೇ ಆರಂಭವಾದ ತುಂತುರು ಮಳೆ ರಾತ್ರಿ ವೇಳೆಗೆ ಜೋರಾಗಿತ್ತು. ಮಲೆನಾಡಿನಾದ್ಯಂತ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಕೊಪ್ಪ ತಾಲೂಕಿನಲ್ಲಿ ಒಂದೇ ರಾತ್ರಿಗೆ ಸುಮಾರು ಮೂರು ಇಂಚಿನಷ್ಟು ಮಳೆ ಸುರಿದಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.
Advertisement
ಉಳಿದ ಶೃಂಗೇರಿ, ಮೂಡಿಗೆರೆ ಹಾಗೂ ಎನ್.ಆರ್.ಪುರದಲ್ಲಿ ಕಳೆದ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದೆ. ರಾತ್ರಿ ವೇಳೆ ಮಳೆ ಸುರಿದಿದ್ದರಿಂದ ಜನ ಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಆದರೆ ಇಡೀ ರಾತ್ರಿ ಸುರಿದಂತ ಧಾರಾಕಾರ ಮಳೆ ಕಂಡು ಮಲೆನಾಡಿಗರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಎಂಟತ್ತು ದಿನಗಳಿಗೆ ಒಮ್ಮೊಮ್ಮೆ ಸುರಿಯುತ್ತಿರುವ ಧಾರಾಕಾರ ಮಳೆ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ.
Advertisement
ಇಂದು ಬೆಳಗ್ಗಿನಿಂದಲೂ ಕೂಡ ಮೂಡಿಗೆರೆಯಲ್ಲಿ ಮಳೆ ಸುರಿಯುತ್ತಿದೆ. ಮಲೆನಾಡು ಭಾಗದಲ್ಲಿ ಆಗಾಗ್ಗೆ ಸುರಿಯುತ್ತಿರುವ ಧಾರಾಕಾರ ಮಳೆ ಕಂಡು ಮಲೆನಾಡಿಗರು ಕಳೆದ ವರ್ಷದ ದುಸ್ಥಿತಿ ಮತ್ತೆ ಎದುರಾಗುತ್ತಾ ಎಂದು ಆತಂಕದಿಂದಲೇ ಬದುಕುತ್ತಿದ್ದಾರೆ. ಇಂದು ಕೂಡ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು ತಣ್ಣನೆಯ ಗಾಳಿ ಬೀಸುತ್ತಿದ್ದು, ಮಧ್ಯಾಹ್ನ ಅಥವ ಸಂಜೆ ವೇಳೆಗೆ ಮತ್ತೆ ಮಳೆಯಾಗಬಹುದು ಎಂದು ಮಲೆನಾಡಿಗರು ಭಾವಿಸಿದ್ದಾರೆ.
ಕರಾವಳಿಯಲ್ಲಿಯೂ ಉತ್ತಮ ಮಳೆ:
ಇತ್ತ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕೂಡ ಇಂದು ಉತ್ತಮ ಮಳೆಯಾಗಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಎಲ್ಲೆಡೆ ಕತ್ತಲು ಆವರಿಸಿತ್ತು. ಬಳಿಕ ಸುರಿಯಲಾರಂಭಿಸಿದ ಮಳೆ ಜಿಲ್ಲಾದ್ಯಂತ ಎಡೆಬಿಡದೆ ಸುರಿಯುತ್ತಿದೆ. ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಮುಂದಿನ 24 ಗಂಟೆ ಇದೇ ರೀತಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಜೊತೆ ಇಂದಿನಿಂದ ಲಾಕ್‍ಡೌನ್ ಇರೋ ಹಿನ್ನೆಲೆಯಲ್ಲಿ ಜನ ಬೆಚ್ಚಗೆ ಮನೆಯಲ್ಲೇ ಲಾಕ್ ಆಗಿದ್ದಾರೆ.