ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾಗೆ ಎರಡು ದಿನದಲ್ಲಿ ಮೂರು ಬಲಿಯಾಗಿದ್ದು ಜಿಲ್ಲೆಯ ಜನ ಆತಂಕಕ್ಕೀಡಾಗಿದ್ದಾರೆ. ಈ ಮೂಲಕ ಕ್ರೂರಿ ಕೊರೊನಾದಿಂದ ಪ್ರಾಣ ತೆತ್ತವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜೊತೆಗೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಭಯಭೀತರಾಗಿದ್ದಾರೆ. ಸೋಮವಾರವಷ್ಟೇ ಜಿಲ್ಲೆಯಲ್ಲಿ ಕೊರೊನಾಗೆ ಇಬ್ಬರು ಸಾವನ್ನಪ್ಪಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆ ನಿವಾಸಿ ನಾಲ್ಕು ದಿನದ ಹಿಂದೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದರು.
ನಗರದ ರಾಮನಹಳ್ಳಿ ನಿವಾಸಿ 72 ವರ್ಷದ ವೃದ್ಧೆ ಕೂಡ ಎರಡು ದಿನದ ಹಿಂದೆ ಸಾವನ್ನಪ್ಪಿದ್ದರು. ಆದರೆ ಆತಂಕದಿಂದ ಸಾವಿನ ಬಳಿಕ ಮನೆಯವರು ಹಾಗೂ ಸರ್ಕಾರ ಕೋವಿಡ್ ಪರೀಕ್ಷೆಗೆ ಮುಂದಾಗಿತ್ತು. ಕೊರೊನಾ ಪರೀಕ್ಷೆಯಲ್ಲಿ ಮೃತ ವೃದ್ಧೆಗೂ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಇದರಿಂದ ಮನೆಯವರಲ್ಲೂ ಕೂಡ ಆತಂಕ ಎದುರಾಗಿದೆ.
ಈ ಮಧ್ಯೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆ ನಿವಾಸಿ 56 ವರ್ಷದ ವ್ಯಕ್ತಿ ಕೂಡ ಮೃತರಾಗಿದ್ದಾರೆ. ಅಸ್ತಮಾ ಹಾಗೂ ಶುಗರ್ ನಿಂದ ಬಳಲುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ನಿನ್ನೆ ಟ್ರಾವೆಲ್ ಹಿಸ್ಟರಿ ಇಲ್ಲದ 8 ಐಎಲ್‍ಐ ಕೇಸ್ ಗಳು ಪತ್ತೆಯಾಗಿದ್ದು ಜಿಲ್ಲೆಯ ಜನರಲ್ಲಿ ಆತಂಕ ತಂದಿದೆ.
ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸ್ ಗಳು ಇರಲಿಲ್ಲ. ಆದರೆ ಕಳೆದ ಸುಮಾರು 55 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 155 ರ ಗಡಿ ದಾಟಿದ್ದು, ಆರು ಜನ ಕ್ರೂರಿ ಕೊರೊನಾಗೆ ಪ್ರಾಣ ತೆತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕು ಹಾಗೂ ಸಾವಿನ ಸಂಖ್ಯೆಯಿಂದ ಜಿಲ್ಲೆಯ ಜನರು ಆತಂಕದಿಂದ ಬದುಕುವಂತಾಗಿದೆ.