ಚಿಕ್ಕಮಗಳೂರು: ಒಂದೇ ಕ್ಷಣಕ್ಕೆ ಚಿಕ್ಕಮಗಳೂರು ನಗರ ನಿವಾಸಿಗಳ ನಿದ್ದೆಗೆಡಿಸಿದ್ದ ಅನಾಮಧೇಯ ಸೂಟ್‍ಕೇಸ್ ಪ್ರಕರಣಕ್ಕೆ ಪೊಲೀಸರು ಇತಿಶ್ರೀ ಹಾಡಿದ್ದಾರೆ. ಸೂಟ್‍ಕೇಸ್‍ನಲ್ಲಿ ಏನೂ ಇರದೆ, ಖಾಲಿ ಇದ್ದಿದ್ದರಿಂದ ಚಿಕ್ಕಮಗಳೂರಿಗರು ನಿಟ್ಟುಸಿರು ಬಿಟ್ಟಿದ್ದಾರೆ.
ಮಹಿಳೆಯೊಬ್ಬಳು ಬುಧವಾರ ಸಂಜೆ 5:30ರ ಸುಮಾರಿಗೆ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಬಂದು ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಕ್ರಿಸ್ಟಲಿನ್ ಹೋಟೆಲ್ ಮುಂಭಾಗದ ಮರದಡಿ ಸೂಟ್‍ಕೇಸ್‍ವೊಂದನ್ನ ಇಟ್ಟು ಹೋಗಿದ್ದಳು. ಅನಾಮಧೇಯ ಸೂಟ್‍ಕೇಸ್ ಕಂಡ ಜನ ಆತಂಕಕ್ಕೀಡಾಗಿದ್ದರು. ಕೂಡಲೇ ಕಾರ್ಯಪ್ರವೃತರಾಗಿದ್ದ ಪೊಲೀಸರು ರಸ್ತೆಯ ಎರಡೂ ಬದಿಯನ್ನೂ ಬಂದ್ ಮಾಡಿ, ಸುಮಾರು 40-50 ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದರು.
ಸ್ಥಳಕ್ಕೆ ಡಾಗ್ ಸ್ಕ್ವಾಡ್ ಕೂಡ ಬಂದು ಪರಿಶೀಲನೆ ನಡೆಸಿತ್ತು. ಬಳಿಕ ಪೊಲೀಸರು ಸುಮಾರು 15 ಅಡಿ ಉದ್ದದ ಕೋಲಿನಿಂದ ಸೂಟ್‍ಕೇಸ್ ಅನ್ನು ಸ್ಥಳಾಂತರಿಸಿ ನಗರದ ರಾಮನಹಳ್ಳಿಯ ಡಿ.ಎ.ಆರ್.ಮೈದಾನಲ್ಲಿ ಗುಂಡಿ ತೋಡಿ ಇಟ್ಟಿದ್ದರು. ಬಳಿಕ ಮಂಗಳೂರಿನ ಬಾಂಬ್ ನಿಷ್ಕ್ರಿಯ ದಳದವರು ಬಂದು ಸೂಟ್‍ಕೇಸ್ ಓಪನ್ ಮಾಡುವವರೆಗೂ ಕಾದಿದ್ದಿರು. ತಡರಾತ್ರಿ ಮಂಗಳೂರಿನಿಂದ ಬಂದ ಬಿಡಿಡಿಎಸ್ ತಂಡ ತಡರಾತ್ರಿ ಮೂರು ಗಂಟೆವರೆಗೂ ಕಾರ್ಯಚರಣೆ ನಡೆಸಿ ಕೊರ್ಡೆಕ್ಸ್ ಮೆಥೆಡ್‍ನಲ್ಲಿ ಸೂಟ್‍ಕೇಸ್ ಓಪನ್ ಮಾಡಿದ್ದಾರೆ. ಆದರೆ ಸೂಟ್‍ಕೇಸ್‍ನಲ್ಲಿ ಏನೂ ಇರದೆ, ಅದು ಖಾಲಿ ಸೂಟ್‍ಕೇಸ್ ಆಗಿತ್ತು. ಇದರಿಂದ ಪೊಲೀಸರು ಹಾಗೂ ಕಾಫಿನಾಡಿನ ಜನ ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.
ಇದು ಸಾಲದಕ್ಕೆ ಮಹಿಳೆ ಸೂಟ್‍ಕೇಸ್ ಇಡುವ ಸನ್ನಿವೇಶ ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಚೂಡಿದಾರ ಹಾಕಿಕೊಂಡು ಮೊಬೈಲ್‍ನಲ್ಲಿ ಮಾತನಾಡಿಕೊಂಡು ನಾರ್ಮಲ್ ಆಗಿ ಬಂದ ಯುವತಿ ಸೂಟ್‍ಕೇಸ್ ಇಟ್ಟು ಹೋಗಿದ್ದಳು. ಈ ದೃಶ್ಯ ಕ್ರಿಸ್ಟಲಿನ್ ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೇರಿಯಾಗಿತ್ತು. ಆ ಮಹಿಳೆ ಯಾರೆಂಬ ಮಾಹಿತಿ ಸ್ಪಷ್ಟವಾಗಿಲ್ಲ.