ಚಿಕ್ಕಮಗಳೂರು: ಜಿಲ್ಲೆಯಲ್ಲಿ ರೋಗಿ- 7778(73 ವರ್ಷ)ದ ವೃದ್ಧೆ ಸಾವನ್ನಪ್ಪುವ ಮೂಲಕ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ.
ಮೃತ ವೃದ್ಧೆ ರೋಗಿ-7753ರ ಸಂಪರ್ಕಿತರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ವೃದ್ಧೆಯನ್ನ ಬುಧವಾರ ಜಿಲ್ಲೆಯ ಕೋವಿಡ್ ಆಸ್ಪತ್ರೆ ದಾಖಲಿಸಲಾಗಿತ್ತು.
ನಿನ್ನೆಯಿಂದಲೂ ಕೂಡ ಅವರಿಗೆ ಕೊರೊನಾ ಚಿಕಿತ್ಸೆಯನ್ನೇ ನೀಡಲಾಗ್ತಿತ್ತು. ಇಂದು ಬೆಳಗ್ಗೆ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಕೊರೊನಾ ರೋಗಿಗಳಿಗೆ ನೀಡುವ ಚಿಕಿತ್ಸೆಯನ್ನೇ ಅವರಿಗೂ ನೀಡಲಾಗಿತ್ತು. ಆದರೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆ ಮಧ್ಯಾಹ್ನ 12.40ಕ್ಕೆ ಕೊನೆಯುಸಿರೆಳೆದಿದ್ದಾರೆಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಆತಂಕದ ಮೊದಲ 55 ದಿನಗಳ ಕಾಲ ಕಾಫಿನಾಡಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣಗಳು ಇರಲಿಲ್ಲ. ಮೇ.19 ರಿಂದ ಒಂದೇ ತಿಂಗಳಿಗೆ ಸೋಂಕಿತರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಾ ಇಂದು 24ಕ್ಕೆ ಏರಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಕರಣಗಳ ಕಂಡು ಕಾಫಿನಾಡಿನ ಜನ ಕೂಡ ಆತಂಕಕ್ಕೀಡಾಗಿದ್ದಾರೆ.