ಚಿಕ್ಕಮಗಳೂರು: ಭಾರತೀಯ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ರಸ್ತೆ ಮಧ್ಯೆಯೇ ಕ್ರಿಕೆಟ್ ಆಡಿದ್ದಾರೆ. ಮೂಲತಃ ಜಿಲ್ಲೆಯ ಕಡೂರು ತಾಲೂಕಿನವರಾದ ವೇದಾ ಕೃಷ್ಣಮೂರ್ತಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಎನ್.ಆರ್.ಪುರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನ ಕಂಡ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.
ಇದೇ ವೇಳೆ ಎನ್.ಆರ್.ಪುರದ ಲೆದರ್ ಬಾಲ್ ಕ್ರಿಕೆಟ್ ಕ್ಲಬ್ ವೇದಾ ಕೃಷ್ಣಮೂರ್ತಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಸನ್ಮಾನದ ಬಳಿಕ ಅಭಿಮಾನಿಗಳು ಬ್ಯಾಟ್ ತಂದು ವೇದಾ ಕೈಗಿಟ್ಟು ಕ್ರಿಕೆಟ್ ಆಡುವಂತೆ ಕೇಳಿಕೊಂಡರು. ಅಭಿಮಾನಿಗಳು ಎಸೆದ ಬಾಲ್‍ಗೆ ವೇದಾ ಎನ್.ಆರ್.ಪುರ ನಗರದ ವಾಟರ್ ಟ್ಯಾಂಕ್ ಸರ್ಕಲ್‍ನಲ್ಲಿ ರಸ್ತೆ ಮಧ್ಯೆಯೇ ಬ್ಯಾಟ್ ಬೀಸಿ ಖುಷಿ ಪಟ್ಟರು.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜಿಲ್ಲೆಯ ಹೆಮ್ಮೆ-ಕೀರ್ತಿಯ ತಾರೆ ಜೊತೆ ಕೆಲ ಕಾಲ ಸಂಭ್ರಮಿಸಿದ ಕ್ಷಣಗಳನ್ನ ಕ್ರಿಕೆಟ್ ಪ್ರೇಮಿಗಳು ಖುಷಿಪಟ್ಟರು. ಅವಕಾಶಕ್ಕಾಗಿ ನಾವು ಕಾಯಬಾರದು. ಅವಕಾಶವನ್ನು ನಾವೇ ಹುಡುಕುವ ಪ್ರಯತ್ನ ಮಾಡಬೇಕು ಎಂದ ವೇದಾ, ಕ್ರಿಕೆಟ್‍ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ನಮ್ಮನ್ನ ನಾವು ಮೊದಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರಿಕೆಟ್‍ನಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ನನಗೆ ಅವಕಾಶ ಸಿಕ್ಕಿದೆ. ಎಲ್ಲಾ ಮಹಿಳೆಯರೂ ಕೂಡ ಎಲ್ಲಾ ಕ್ಷೇತ್ರದಲ್ಲೂ ಕೂಡ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದ ವೇದಾ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.