ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕ್ರಮೇಣ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ಯಾ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ. ಯಾಕೆಂದರೆ ಕೊರೊನಾ ಆರಂಭವಾದ ಮೊದಲ 55 ದಿನಗಳ ಕಾಲ ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣಗಳಿರಲಿಲ್ಲ. ಮೇ 19 ರಂದು ವೈದ್ಯ ಹಾಗೂ ಗರ್ಭಿಣಿ ಪ್ರಕರಣದಿಂದ ಕಾಲಿಟ್ಟ ಹೆಮ್ಮಾರಿ ಕೊರೊನಾದಿಂದ ಇಂದು ಸೋಂಕಿತರ ಸಂಖ್ಯೆ 21ಕ್ಕೆ ಏರಿದೆ.
ಈ ನಡುವೆ ಒಂದೇ ಒಂದು ಸಮಾಧಾನಕರ ಸಂಗತಿ ಅಂದ್ರೆ ಪಾಸಿಟಿವ್ ಬಂದವರೆಲ್ಲಾ ಮುಂಬೈ ಹಾಗೂ ದೆಹಲಿಯಿಂದ ಹಿಂದಿರುಗಿರುವವರು ಅನ್ನೋದೆ ಖುಷಿಯ ವಿಚಾರ. ಈ ಮಧ್ಯೆ ಒಂದೂ ಪ್ರಕರಣವಿರದ ಕಡೂರಿನಲ್ಲಿ ಯಾವ ಮೂಲವೂ ಇಲ್ಲದ, ಟ್ರಾವೆಲ್ ಹಿಸ್ಟರಿಯೂ ಇಲ್ಲದ 16 ವರ್ಷದ 10ನೇ ತರಗತಿ ಬಾಲಕನಲ್ಲೂ ಕೊರೊನಾ ಕಂಡು ಕಡೂರಿಗರು ಆತಂಕಕ್ಕೀಡಾಗಿದ್ದರು. ಆದರೆ ಇದೀಗ ಆ ಬಾಲಕನಿಗೆ ನೆಗೆಟಿವ್ ಎಂದು ಹೇಳಲಾಗ್ತಿದ್ದು, ಸರ್ಕಾರದ ಅಧಿಕೃತ ಆದೇಶವಷ್ಟೇ ಬಾಕಿ ಉಳಿದಿದೆ. ಸಚಿವ ಸಿ.ಟಿ ರವಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆ ಬಾಲಕನಿಗೆ ನೆಗೆಟಿವ್ ಎಂದು ಹೇಳಿದ್ದಾರೆ.
ಈ ಮಧ್ಯೆ ಇಂದು ಕೂಡ ಕೊಪ್ಪ ಹಾಗೂ ತರೀಕೆರೆ ಮೂಲದ ಮುಂಬೈ ರಿಟರ್ನ್ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಬಂದವರೆಲ್ಲಾ ಹೊರ ರಾಜ್ಯದಿಂದ ಬಂದವರಾಗಿದ್ದು, ಎಲ್ಲರೂ ಕ್ವಾರಂಟೈನ್ ನಲ್ಲಿರೋದು ಜಿಲ್ಲೆಯ ಜನರ ನೆಮ್ಮದಿಗೆ ಕಾರಣವಾಗಿದೆ. ಸದ್ಯ ಪಾಸಿಟಿವ್ ಬಂದವರಲ್ಲಿ ಐವರು ಮಾತ್ರ ಚಿಕಿತ್ಸೆಯಲ್ಲಿದ್ದು, ಉಳಿದ 16 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಮೇ.19ರಂದು ಬಂದ ಮೂಡಿಗರೆ ವೈದ್ಯ ಹಾಗೂ ತರೀಕೆರೆ ಗರ್ಭಿಣಿ ಪ್ರಕರಣ ಲ್ಯಾಬ್ ಎಡವಟ್ಟಿನಿಂದ ರದ್ದುಗೊಂಡಿದೆ. ಕಡೂರಿನ ಬಾಲಕನ ಪ್ರಕರಣವೂ ಅದೇ ಹಾದಿಯಲ್ಲಿದ್ದು, ಸ್ಥಳೀಯರಿಗೆ ಸೋಂಕು ತಗುಲದ ಕಾರಣ ಜನ ನಿಟ್ಟುಸಿರು ಬಿಟ್ಟಿದ್ದಾರೆ.