ಚಿಕ್ಕಮಗಳೂರು: ಕಳೆದ ಇಪ್ಪತ್ತು ದಿನಗಳಿಂದ ಜಿಲ್ಲೆಯಲ್ಲಿ ಬಿಡುವು ನೀಡಿದ್ದ ವರುಣದೇವ ಚಿಕ್ಕಮಗಳೂರು ನಗರದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಆಗಸ್ಟ್ ಮೊದಲ ವಾರದಲ್ಲಿ ಮನಸ್ಸೋ ಇಚ್ಛೆ ಸುರಿದು ಸಾಕಷ್ಟು ಅವಾಂತರಗಳನ್ನ ಸೃಷ್ಠಿಸಿದ್ದ ವರುಣದೇವ ಆಗಸ್ಟ್ 11ರ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣ ಬಿಡುವು ನೀಡಿದ್ದ. ಜಿಲ್ಲೆಯ ಜನರಿಗೆ ಬೇಸಿಗೆ ಕಾಲದ ಅನುಭವವಾಗಿತ್ತು. ಇಂದು ಬೆಳಗ್ಗೆಯಿಂದಲೂ ಚಿಕ್ಕಮಗಳೂರು ನಗರದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಬಿಸಿಲು ಇತ್ತು. ಮಧ್ಯಾಹ್ನ 1 ಗಂಟೆ ಆರಂಭವಾದ ದಿಢೀರ್ ಮಳೆ ಸುಮಾರು ಅರ್ಧ ಗಂಟೆಗಳ ಕಾಲ ಮನಸ್ಸೋ ಇಚ್ಛೆ ಸುರಿದು ಮಲೆನಾಡಿಗರಿಗೆ ಮತ್ತೆ ಆತಂಕ ತಂದಿಟ್ಟಿದ್ದಾನೆ.
ನೋಡ-ನೋಡ್ತಿದ್ದಂತೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿದಿದೆ. ಭಾರೀ ಮಳೆ ಕಂಡು ಸ್ಥಳೀಯರು ಮತ್ತೆ ಕಂಗಾಲಾಗಿದ್ದಾರೆ. ಆಗಸ್ಟ್ ಮೊದಲ ವಾರದ ಮಳೆ ಮಲೆನಾಡಿಗರಲ್ಲಿ ಭಯ ಹುಟ್ಟಿಸಿತ್ತು. ಒಂದೇ ವಾರದ ಮಳೆ ಮಲೆನಾಡಲ್ಲಿ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಈಗ ಮತ್ತೆ ದಿಢೀರ್ ಮಳೆ ಕಂಡು ಜನ ಆತಂಕಕ್ಕೀಡಾಗಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ವರುಣದೇವ ಕಣ್ಣಾಮುಚ್ಚಾಲೆ ಆಟವಾಡಿದ್ದಾನೆ. ನಗರದ ಕೆಲ ಭಾಗದಲ್ಲಿ ಬಿಸಿಲು, ಕೆಲ ಭಾಗ ಧಾರಾಕಾರ ಮಳೆ ಕಂಡು ಪ್ರಕೃತಿ ಎತ್ತ ಸಾಗ್ತಿದೆ, ಏನಾಗಿದೆ ಎಂದು ಜನ ಆತಂಕಕ್ಕೀಡಾಗಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗದಲ್ಲೂ ಅಲ್ಲಲ್ಲೇ ಮೋಡಕವಿದ ವಾತಾವರಣವಿದ್ದು, ತುಂತುರು ಮಳೆಯಾಗಿದೆ. ಕಳೆದ ವರ್ಷ ಹಾಗೂ ಈ ಬಾರಿ ಮಲೆನಾಡಲ್ಲಿ ಭಾರೀ ಮಳೆಯಾಗಿದೆ. ಕಳೆದ ವರ್ಷವಂತೂ ಮಲೆನಾಡಿಗರು ಮನೆ-ಮಠ-ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಳ್ಳುವಂತಹಾ ಮಳೆ ಸುರಿದಿತ್ತು. ಈ ವರ್ಷವೂ ಆಗಸ್ಟ್ ಆರಂಭದ ಮಳೆ ಅಂತದ್ದೇ ಭಯ ತರಿಸಿತ್ತು. ಆದರೆ ವರುಣದೇವ ಬಿಡುವು ನೀಡಿದ್ದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಸುರಿದ ದಿಢೀರ್ ಮಳೆ ಕಂಡು ಕಂಡು ಮತ್ತೆ ಭಯಭೀತರಾಗಿದ್ದಾರೆ.