ಕೊಪ್ಪಳ: ಮನೆಯಲ್ಲಿ ಬಿಚ್ಚಿಟ್ಟಿದ್ದ ಬಂಗಾರ ಸರವನ್ನು ಸಾಕಿದ ನಾಯಿ ಮರಿಯೇ ತಿಂದು ಹಾಕಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದಿದೆ.
ಸದ್ಯ ತಿಂದಿರುವ ಚಿನ್ನದ ಸರದ ಒಂದಿಷ್ಟು ತುಂಡುಗಳು ನಾಯಿಯ ಮಲದಲ್ಲಿ ತುಂಡುಗಳು ಹೊರಗೆ ಬಂದಿದೆ. ಕಾರಟಗಿಯ ದಿಲೀಪ ಕುಮಾರ್ ಹಿರೇಮಠ ಎಂಬವರು ಮನೆಯಲ್ಲಿ ಪಮೋರಿಯನ್ ತಳಿಯ ನಾಯಿಯನ್ನು ಸಾಕಿದ್ದಾರೆ. ಸುಮಾರು ಮೂರು ತಿಂಗಳ ವಯಸ್ಸಿನ ಈ ನಾಯಿ ಮರಿ 20 ಗ್ರಾಂ ತೂಕದ ಚಿನ್ನದ ಸರವನ್ನು ತಿಂದಿದೆ. ಇದರ ಮೌಲ್ಯ ಒಂದು ಲಕ್ಷ ರೂಪಾಯಿಯಾಗಿದೆ ಎಂದು ಮನೆಯವರು ಹೇಳುತ್ತಿದ್ದಾರೆ. ಇದನ್ನೂ ಓದಿ: ಸೆಲ್ಫಿ ಕ್ರೇಜ್ – ಸಮುದ್ರದ ಪಾಲಾದ ಯುವಕ
ದಿಲೀಪ್ ನಿನ್ನೆ ರಾತ್ರಿ ತಮ್ಮ ಕೊರಳಲ್ಲಿದ್ದ ಚಿನ್ನದ ಚೈನ್‍ನನ್ನು ಮನೆಯಲ್ಲಿನ ಗಾಡ್ರೇಜ್ ಕೆಳಗೆ ಬಿಚ್ಚಿಟ್ಟಿದ್ದರಂತೆ. ಬೆಳಗ್ಗೆ ನೋಡಿದಾಗ ಚಿನ್ನದ ಚೈನ್ ತುಂಡೊಂದು ಬಿದ್ದಿರುವುದು ಕಾಣಿಸಿದೆ. ಬಿಚ್ಚಿಟ್ಟಿದ್ದ ಚಿನ್ನದ ಚೈನ್‍ನನ್ನು ದಿಲೀಪ್ ಅವರು ಹುಡುಕಾಡಿದ್ದಾರೆ. ಸರ ಸಿಗದೆ ಇದ್ದಾಗ ನಾಯಿ ಗುಳುಂ ಮಾಡಿರಬಹುದು ಎಂಬ ಅನುಮಾನದ ಮೇಲೆ ಸ್ಥಳೀಯ ಪಶುವೈದ್ಯರ ಬಳಿ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ್ದಾರೆ.
ತಪಾಸಣೆ ವೇಳೆ ನಾಯಿ ಮರಿಯೇ ಚಿನ್ನದ ಸರವನ್ನು ತಿಂದು ಮುಗಿಸಿರುವುದು ಪಕ್ಕಾ ಆಗಿದೆ. ಸದ್ಯ ನಾಯಿಯು ಮಲ ಮಾಡಿದಾಗ ಅದರ ಮಲದಲ್ಲಿ ಚಿನ್ನದ ಸರದ ತುಂಡುಗಳು ಪತ್ತೆಯಾಗಿವೆ. ಇನ್ನುಳಿದ ಚಿನ್ನದ ಸರದ ತುಂಡುಗಳು ನಾಯಿಯ ಹೊಟ್ಟೆಯಲ್ಲಿದ್ದು ಮಲದ ಮೂಲಕ ಹೊರ ಬರುತ್ತದೆಯೇನೋ ಎಂದು ನಿರೀಕ್ಷೆಯಲ್ಲಿದ್ದಾರೆ. ನಾಯಿ ಮರಿ ಮಲ ಹಾಕುವುದನ್ನು ಮನೆಯವರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಟ- ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗೆ ದಾಖಲು