ಮಡಿಕೇರಿ: ಕಾಡುಕುರಿಗಳನ್ನು ಬೇಟೆಯಾಡಿ ಅದರ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಡುಗು ಅರಣ್ಯ ಸಂಚಾರಿ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕದನೂರು ನಿವಾಸಿ ಕೆ.ಎಂ ಜೋಯಪ್ಪ (37) ಬಂಧಿತ ಆರೋಪಿಯಾಗಿದ್ದು, ಈತ ಕಾಡುಕುರಿಗಳನ್ನು ಬೇಟೆಯಾಡಿ ಹಿಡಿದು ಬಳಿಕ ಅದರ ಚರ್ಮವನ್ನು ಮಾರಾಟ ಮಾಡುತ್ತಿದ್ದ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಸಂಚಾರಿ ದಳದ ಪೊಲೀಸರು, ಜೋಯಪ್ಪನಿಂದ 2 ಕುರಿಯ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದನ್ನೂ ಓದಿ: ಕೊಡಗಿನ 47 ಪ್ರವಾಹ, 38 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ ಜಿಲ್ಲಾಡಳಿತ
ಮಡಿಕೇರಿಯ ಕಗ್ಗೋಡು ಜಂಕ್ಷನ್ ಬಳಿ ನಡೆದ ಕಾರ್ಯಾಚರಣೆಯು ಅರಣ್ಯ ಸಂಚಾರಿ ದಳದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ನಡೆಯಿತು. ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು ಸವಿ, ಹೆಡ್ ಕಾನ್‍ಸ್ಟೆಬಲ್ ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್ ಹಾಗೂ ಚಾಲಕ ಮೋಹನ್ ಪಾಲ್ಗೊಂಡಿದ್ದರು.