ಆನೇಕಲ್: ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಮುಂಜಾನೆ ಅಪಾರ್ಟ್‍ಮೆಂಟ್ ನ ಒಳಗೆ ಪ್ರವೇಶಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಅಪಾರ್ಟ್‍ಮೆಂಟ್ ನಿವಾಸಿಗಳು ಭಯ ಭೀತರಾಗಿದ್ದಾರೆ.
ಬೆಂಗಳೂರು ಹೊರವಲಯದ ಬೇಗೂರಿನ ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್ ಮೆಂಟ್ ನ ಒಳಗೆ ಚಿರತೆ ಪ್ರವೇಶ ಮಾಡುತ್ತಿರುವ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜನರು ಬಾಗಿಲು ಹಾಕಿಕೊಂಡೆ ಕಾಲ ಕಳೆಯುತ್ತಿದ್ದಾರೆ. ಅಪಾರ್ಟ್‍ಮೆಂಟ್ ನಲ್ಲಿ ಒಟ್ಟು ಒಂಬತ್ತು ಟವರ್ ಗಳಿದ್ದು ನೂರಾರು ಮನೆಗಳಿವೆ. ಹೀಗಾಗಿ ಅಲ್ಲಿನ ನಿವಾಸಿಗಳನ್ನು ಅಪಾರ್ಟ್‍ಮೆಂಟ್ ನಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ.
ಚಿರತೆಯು ಬನ್ನೇರುಘಟ್ಟ ಅಭಯಾರಣ್ಯದಿಂದ ನಾಡಿನ ಕಡೆಗೆ ಬಂದಿದೆ ಎಂದು ಹೇಳಲಾಗುತ್ತಿದ್ದು, ಮುಂಜಾನೆಯ ವೇಳೆ ರಸ್ತೆ ದಾಟಿ ಅಪಾರ್ಟ್ ಮೆಂಟ್ ಒಳ ಹೋಗಿದೆ. ಇದರಿಂದ ಅಲ್ಲಿನ ಜನರು ಸಾಕಷ್ಟು ಆತಂಕಕ್ಕೆ ಈಡಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸರು ದೌಡಾಯಿಸಿ ಅಪಾರ್ಟ್‍ಮೆಂಟ್ ನಿವಾಸಿಗಳು ಯಾರೂ ಸಹ ಹೊರ ಬರದಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಅಪಾರ್ಟ್ ಮೆಂಟ್ ಒಳ ಪ್ರವೇಶ ಮಾಡಿರುವ ಚಿರತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.