ಮಂಗಳೂರು: ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಬಹಳಷ್ಟು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಪೈಕಿ ಮನುಷ್ಯನಿಂದ ಹೆಚ್ಚು ತೊಂದರೆಗೊಳಗಾಗುವ ಮುಗ್ಧ, ಅಮಾಯಕ ಜೀವಿ ಎಂದರೆ ಅದು ಆನೆಗಳು. ಹೀಗಾಗಿ ಆನೆಗಳಿಗೂ, ಮನುಷ್ಯನಿಗೂ ನಡುವೆ ಇರುವ ಸಂಬಂಧ ಅಷ್ಟಕಷ್ಟೇ. ಎಷ್ಟೇ ಸಾಕಿ ಬೆಳೆಸಿದ ಆನೆಯೂ ಕೆಲವು ಸಂದರ್ಭಗಳಲ್ಲಿ ತನ್ನನ್ನು ಸಾಕಿದ ಮಾವುತನನ್ನೇ ಬಲಿ ಪಡೆದ ಉದಾಹರಣೆಗಳು ನಮ್ಮ ಮುಂದಿದೆ. ಸಾಕಾನೆಗಳೇ ಇಷ್ಟು ಅಪಾಯಕಾರಿಯಾಗಿರುವಾಗ ಇನ್ನು ಕಾಡಾನೆಗಳ ಸ್ವಭಾವವನ್ನು ಅರಿತುಕೊಳ್ಳುವುದು ಸಾಧ್ಯವೇ? ಖಂಡಿತಾ ಇಲ್ಲ ಎಂದು ನಾವೆಲ್ಲ ಅಂದುಕೊಳ್ಳಬಹುದು. ಆದರೆ ಅದಕ್ಕೆ ಅಪವಾದ ಎನ್ನುವಂತೆ ಅಪರೂಪದ ಆನೆ-ಮನುಷ್ಯನ ಬಾಂಧವ್ಯದ ಕಥೆ ಇಲ್ಲಿದೆ.
ಕಾಡಾನೆಗಳು ನಾಡಿಗೆ ಆಹಾರ ಅರಸಿಕೊಂಡು ಲಗ್ಗೆಯಿಟ್ಟರೆ ಎಲ್ಲವನ್ನೂ ಪುಡಿಗೈಯುತ್ತವೆ ಎನ್ನುವುದು ಸಾಮಾನ್ಯ ನಂಬಿಕೆ. ಹೀಗಾಗಿ ಕಾಡಾನೆಗಳ ಸ್ವಭಾವವನ್ನು ಕಣ್ಣಾರೆ ಕಂಡ ಕಾಡಿನಂಚಿನಲ್ಲಿ ಬದುಕುವ ಕುಟುಂಬಗಳು ಸಾಧ್ಯವಾದಷ್ಟೂ ಕಾಡಾನೆಗಳ ಸಹವಾಸದಿಂದ ದೂರವೇ ಉಳಿಯುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದ ಕಾಡಿನಿಂದ ಕೊಡಗಿನ ಭಾಗಮಂಡಲ ಕಾಡಿಗೆ ಪ್ರತೀ ವರ್ಷವೂ ಸವಾರಿ ಹೋಗುವ ಆನೆಯೊಂದು ಇತರ ಕಾಡಾನೆಗಳಿಗಿಂತ ಕೊಂಚ ಭಿನ್ನ. ಪ್ರತಿ ಡಿಸೆಂಬರ್ ಕೊನೆ ವಾರದಲ್ಲಿ ಪಂಜ ಕಾಡಿನಿಂದ ಸವಾರಿ ಹೊರಡುವ ಈ ಕಾಡಾನೆ, ಕಾಡು-ನಾಡು, ನದಿ-ತೊರೆಗಳನ್ನು ದಾಟಿ ಕೊಡಗಿನ ಭಾಗಮಂಡಲ ಅರಣ್ಯವನ್ನು ಸೇರುತ್ತದೆ. ಆದರೆ ಈ ಬಾರಿ ಜನವರಿ ಕೊನೆಯ ವಾರದಲ್ಲಿ ಈ ಆನೆ ತನ್ನ ಸವಾರಿಯನ್ನು ಆರಂಭಿಸಿದ್ದು, ದಾರಿ ಮಧ್ಯೆ ಕೆಲವು ಮನೆಗಳ ಮುಂದೆಯೂ ಈ ಆನೆ ಹಾದು ಹೋಗುತ್ತದೆ.
Advertisement
Advertisement
ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಪೆರಾಜೆ ನಿವಾಸಿ ಸುಧಾಕರ್ ರೈ ಮನೆಯ ಮುಂದೆ ಕಳೆದ ಹತ್ತು ವರ್ಷಗಳಿಂದ ಈ ಆನೆ ಹಾದು ಹೋಗುತ್ತಿದ್ದು, ಈವರೆಗೂ ಜನರಿಗೆ ಯಾವ ತೊಂದರೆಯನ್ನೂ ಮಾಡಿಲ್ಲ. ಕಾಡಿನ ದಾರಿಯಾಗಿ ಬರುವ ಈ ಆನೆ ಕಾಡಿನ ದಾರಿ ಮುಗಿದಾಗ ನಾಡಿನ ದಾರಿ ಮೂಲಕ ಮತ್ತೊಂದು ಕಾಡು ಸೇರುತ್ತದೆ. ಹೀಗೆ ಸಾಗುವ ಸಂದರ್ಭದಲ್ಲಿ ಹಸಿವಿನ ಅನುಭವವಾದಾಗ ದಾರಿ ಮಧ್ಯೆ ಸಿಗುವ ಬಾಳೆ ಗಿಡ, ಹೂವಿನ ಗಿಡಗಳನ್ನು ತಿಂದು ಸಾಗುವ ಈ ಆನೆ ಇದೀಗ ಈ ಗ್ರಾಮದಾದ್ಯಂತ ಚಿರ ಪರಿಚಿತವಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.
Advertisement
ಸಾಮಾನ್ಯವಾಗಿ ಅರಣ್ಯ ಇಲಾಖೆಯು ಆನೆಗಳ ಚಲನವಲನಗಳನ್ನು ಗಮನಿಸಬೇಕಾಗಿದ್ದು, ಈ ಆನೆಯ ವಿಚಾರದಲ್ಲಿ ಮಾತ್ರ ಸಂಬಂಧಪಟ್ಟ ಗ್ರಾಮಸ್ಥರೇ ನೋಡಿಕೊಳ್ಳುತ್ತಿದ್ದಾರೆ. ಪಂಜ ಕಾಡಿನಿಂದ ಆನೆ ಸವಾರಿ ಹೊರಟಿದೆ ಎನ್ನುವುದನ್ನು ತಿಳಿದ ತಕ್ಷಣವೇ ಅಲರ್ಟ್ ಆಗುವ ಆ ಗ್ರಾಮದ ಜನ ಆನೆ ಸಾಗುವ ಗ್ರಾಮದ ಜನರಿಗೆ ಆನೆ ಸವಾರಿಯ ಸುದ್ದಿ ತಲುಪಿಸುತ್ತಾರೆ.
Advertisement
ಸುಮಾರು 30 ರಿಂದ 35 ವರ್ಷ ಪ್ರಾಯದ ಈ ಆನೆ ಪಂಜ, ಉಬರಡ್ಕ, ದೇರಾಜೆ ಮಾರ್ಗವಾಗಿ ಪೆರಾಜೆ ಮೂಲಕ ಭಾಗಮಂಡಲ ಕಾಡನ್ನು ಸೇರುತ್ತದೆ. ಈ ಮಧ್ಯೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯನ್ನೂ ದಾಟುವ ಈ ಆನೆ ಪಯಸ್ವಿನಿ ನದಿಯನ್ನು ಈಜಾಡಿಯೇ ಭಾಗಮಂಡಲ ಅರಣ್ಯಕ್ಕೆ ಸೇರುತ್ತದೆ. ಹೀಗೆ ಹೊರಟ ಈ ಕಾಡಾನೆ ಫೆಬ್ರವರಿ ಕೊನೆಯ ವಾರಕ್ಕೆ ಮತ್ತೆ ಇದೇ ಮಾರ್ಗವಾಗಿ ಪಂಜ ಅರಣ್ಯವನ್ನು ಸೇರುತ್ತಿದ್ದು, ದಾರಿ ಮಧ್ಯೆ ಕಾಡಾನೆಗೆ ಯಾವುದೇ ರೀತಿಯ ತೊಂದರೆಯಾಗದಂತೆಯೂ ಗ್ರಾಮಸ್ಥರು ನೋಡಿಕೊಂಡಿದ್ದಾರೆ. ಹೀಗೆ ಒಂದು ಅಪರೂಪದ ಬಾಂಧವ್ಯ ಈ ಆನೆ ಮತ್ತು ಗ್ರಾಮಸ್ಥರ ನಡುವೆ ಬೆಳೆದಿದ್ದು ಈ ಬಾಂಧವ್ಯ ಹೀಗೆಯೇ ಉಳಿಯಲಿ ಎನ್ನುವುದು ಹಾರೈಕೆಯಾಗಿದೆ.