ಮಡಿಕೇರಿ : ನಿನ್ನೆ ಸಂಜೆ ಹಾಗೂ ರಾತ್ರಿ ಕೊಡಗು ಜಿಲ್ಲೆಯ ಎರಡು ಕಡೆ ನಡೆದ ಪ್ರತ್ಯೇಕ ಆನೆ ದಾಳಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಮಡಿಕೇರಿ ತಾಲೂಕು ನಾಪೇಕ್ಲು ಸಮೀಪದ ಪೇರೂರು ಗ್ರಾಮದ 48 ವರ್ಷದ ಅಪ್ಪಣ್ಣ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಭಾನುವಾರ ಸಂಜೆ ಸಮಾರಂಭವೊಂದನ್ನು ಮುಗಿಸಿ ಮನೆಗೆ ತೆರಳುವ ಸಂದರ್ಭ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡು ಅಪ್ಪಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸೋಮವಾರಪೇಟೆ ತಾಲೂಕಿನ ಕೂಗೂರಿನಲ್ಲೂ ಭಾನುವಾರ ಸಂಜೆ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಗಾಯಗೊಂಡಿದ್ದಾರೆ. ಕೂಗೂರಿನ ಮೋಹನ್ ಅವರ ಕಾಫಿ ತೋಟದಲ್ಲಿ ಕಾಫಿ ಹಣ್ಣು ಬಿಡಿಸುತ್ತಿದ್ದ ವೇಳೆ ಕಾಡಾನೆ ಹಠತ್ತಾನೆ ದಾಳಿ ನಡೆಸಿದೆ. ತಕ್ಷಣವೇ ಸ್ಥಳಿಂದ ಓಡಿದ್ದಾರೆ. ಅಷ್ಟರಲ್ಲೇ ಸುಕೂರ್ ಮತ್ತು ಓಮೇಜ್ ಆನೆ ದಾಳಿಯಿಂದ ಗಾಯಗೊಂಡಿದ್ದಾರೆ.
ಪಕ್ಕದಲ್ಲೇ ಇದ್ದ ಕಾರ್ಮಿಕ ಮಹಿಳೆ ಎರಡು ವರ್ಷದ ಮಗುವನ್ನು ಎತ್ತಿಕೊಂಡು ಓಡುವ ವೇಳೆ ಬಿದ್ದಿದ್ದಾರೆ. ಪರಿಣಾಮ ಮಗುವಿನ ಕೈ ಮುರಿದಿದೆ. ಎರಡು ಪ್ರಕರಣಗಳಲ್ಲೂ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.