ಚಾಮರಾಜನಗರ: ಜಿಲ್ಲೆಯಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ಕಡೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ಮರು ಸ್ಥಾಪಿಸಲಾಗಿದೆ. ಆದರೆ ಈ ಚೆಕ್ ಪೋಸ್ಟ್ ಗಳು ನಾಮಕಾವಸ್ಥೆ ಎಂಬಂತಿದ್ದು ಇವುಗಳ ಉದ್ದೇಶವೇ ವಿಫಲವಾಗಿದೆ.
ಹೊರ ಜಿಲ್ಲೆಗಳಿಂದ ಅನಾವಶ್ಯಕವಾಗಿ ಬರುವವರನ್ನು ನಿರ್ಬಂಧಿಸುವುದು ಉಳಿದವರನ್ನು ಚೆಕ್ ಪೋಸ್ಟ್ ಗಳಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ತಪಾಸಣೆ ನಡೆಸುವುದು, ರೋಗ ಲಕ್ಷಣ ಇದ್ದರೆ ವಾಪಸ್ ಕಳುಹಿಸುವ ಉದ್ದೇಶದಿಂದ ಈ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ ಚಾಮರಾಜನಗರ ಜಿಲ್ಲೆಯಿಂದ ಹೊರಜಿಲ್ಲೆಗಳಿಗೆ ಕಾರಣವಿಲ್ಲದೆ ಹೋಗುವವರಿಗೆ ನಿರ್ಬಂಧ ಹೇರುವುದು ಈ ಚೆಕ್ ಪೋಸ್ಟ್ ಗಳ ಉದ್ದೇಶವಾಗಿದೆ. ಆದರೆ ಇಲ್ಲಿ ಯಾವುದೇ ತಪಾಸಣೆ ನಡೆಯುತ್ತಿಲ್ಲ. ವಾಹನಗಳು ಚೆಕ್ ಪೋಸ್ಟ್ ಗಳ ಮೂಲಕ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ.
ಪ್ರತಿ ಚೆಕ್ ಪೋಸ್ಟ್ ಗು ಒಬ್ಬ ನೂಡಲ್ ಅಧಿಕಾರಿ ಸೇರಿದಂತೆ ಒಂದು ಪಾಳಿಗೆ ಆರು ಮಂದಿ ಸರ್ಕಾರಿ ನೌಕರರನ್ನು ನಿಯೋಜಿಸಲಾಗಿದೆ. ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಇವರ ಜೊತೆ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಚಾಮರಾಜನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಬಾಣಹಳ್ಳಿ, ಹೆಗ್ಗವಾಡಿ, ಹಿರಿಕಾಟಿ, ಟಗರಪುರ ಸತ್ತೇಗಾಲ ಬಳಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು ಇವುಗಳ ಉದ್ದೇಶ ಕಾರ್ಯಗತವಾಗದೆ ನಿಷ್ಪ್ರಯೋಜಕವಾಗಿವೆ.
ಚೆಕ್ ಪೋಸ್ಟ್ ಗಳ ಬಳಿ ಶಾಮಿಯಾನಗಳನ್ನು ಹಾಕಲಾಗಿದೆ. ತಮ್ಮ ಸರದಿ ಬಂದಾಗ ಇಲ್ಲಿಗೆ ಬರುವ ಸರ್ಕಾರಿ ನೌಕರರು ಮತ್ತು ಪೊಲೀಸರು ಶಾಮಿಯಾನದಡಿ ಕುಳಿತು ತಮ್ಮ ಅವಧಿ ಮುಗಿದ ನಂತರ ಹೋಗತೊಡಗಿದ್ದಾರೆ. ಹಾಗಾಗಿ ಯಾವ ಪುರುಷಾರ್ಥಕ್ಕೆ ಈ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂಬ ಆರೋಪಗಳು ಕೇಳಿಬರತೊಡಗಿವೆ.