ನವದೆಹಲಿ: ಕಾಂಗ್ರೆಸ್‍ನಲ್ಲಿನ ನಾಯಕತ್ವ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿದಿಲ್ಲ. ನೂತನ ನಾಯಕನ ಆಯ್ಕೆಗೆ ಕರೆಯಲಾಗಿದ್ದ ಸಭೆ 7 ಗಂಟೆಗಳ ಕಾಲ ನಡೆದರೂ ಒಳ ಜಗಳದಿಂದ ಒಮ್ಮತದ ಆಯ್ಕೆಯಾಗಿಲ್ಲ. ಸದ್ಯಕ್ಕೆ ಹಂಗಾಮಿ ಅಧ್ಯಕ್ಷರನ್ನಾಗಿ ಸೋನಿಯಾಗಾಂಧಿ ಅವರನ್ನೇ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಂದಿನ ಅಧ್ಯಕ್ಷರ ಆಯ್ಕೆಯಾಗುವವರೆಗೂ ಅಂದರೆ ಕನಿಷ್ಠ ಇನ್ನೊಂದು ವರ್ಷದ ಅವಧಿಗಾದರೂ ಸೋನಿಯಾ ಅವರನ್ನು ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಸಭೆ ಆರಂಭಕ್ಕೆ ಮುನ್ನ ಅಧ್ಯಕ್ಷ ಸ್ಥಾನ ತ್ಯಜಿಸುವ ಬಗ್ಗೆ ಸೋನಿಯಾಗಾಂಧಿ ಮಾತನಾಡಿದ್ದರು.
ಶತ ಶತಮಾನಗಳ ಐತಿಹ್ಯ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಅಂತರ್ಯುದ್ಧ ಜೋರಾಗಿದೆ. ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷ ಇಬ್ಭಾಗವಾಗಿದೆ. ಇವತ್ತು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ (ಸಿಡಬ್ಲ್ಯುಸಿ)ಯಲ್ಲಿ ಒಳಜಗಳ ಬಹಿರಂಗಗೊಂಡಿದೆ. ಹಿರಿಯ ಹಾಗೂ ಕಿರಿಯ ನಾಯಕರ ಮಧ್ಯೆ ಕಿತ್ತಾಟವಾಗಿದೆ. ನಾಯಕತ್ವ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 23 ಮುಖಂಡರು ಬರೆದಿದ್ದಾರೆ ಎನ್ನಲಾದ `ಪತ್ರ’ವೇ ಒಳ ಜಗಳಕ್ಕೆ ಕಾರಣವಾಗಿದೆ.
ಬಿಜೆಪಿ ನಾಯಕರ ಜೊತೆ ಸೇರಿ ಕೆಲವರು ನಾಯಕತ್ವ ಪ್ರಶ್ನಿಸುತ್ತಿದ್ದಾರೆ ಅಂತ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯಿಂದ ಕಾಂಗ್ರೆಸ್ ನಿಷ್ಠರಾದ ಕಪಿಲ್ ಸಿಬಲ್ ಹಾಗೂ ಗುಲಾಂ ನಬಿ ಆಜಾದ್ ಸಿಡಿದೆದ್ದಿದ್ದರು. ರಾಹುಲ್ ಗಾಂಧಿ ಹೇಳಿಕೆ ಸಾಬೀತಾದರೆ ರಾಜೀನಾಮೆ ಕೊಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ಇನ್ನು 4 ಮಂದಿ ಹಿರಿಯ ನಾಯಕರು ಸಭೆಯ ಮಧ್ಯೆಯೇ ಎದ್ದು ಹೊರನಡೆದಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮೊದಲೇ ಬಿಜೆಪಿ ಸುನಾಮಿಯಿಂದ ಅಲುಗಾಡುತ್ತಿದ್ದ ಕಾಂಗ್ರೆಸ್, ಹಿರಿಯ ನಾಯಕರ ಬಂಡಾಯದಿಂದ ನೆಲಕ್ಕೆ ಕುಸಿಯೋ ಹಂತಕ್ಕೆ ತಲುಪಿತ್ತು. ಆದರೆ ರಾಹುಲ್ ಗಾಂಧಿ ಕರೆ ಮಾಡಿ ಸ್ಪಷ್ಟನೆ ನೀಡುತ್ತಿದ್ದಂತೆ ಕಾಂಗ್ರೆಸ್ ಹಿರಿಯ ನಾಯಕರು ತಣ್ಣಗಾಗಿದ್ದಾರೆ. ಕಪಿಲ್ ಸಿಬಲ್ ತಾವು ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ್ರೆ, ಕಾಂಗ್ರೆಸ್ ಪಕ್ಷದ ಮತ್ತೊಬ್ಬ ನಿಷ್ಠಾವಂತ ಗುಲಾಂ ನಬಿ ಆಜಾದ್ ಉಲ್ಟಾ ಹೊಡೆದಿದ್ದಾರೆ.