– ಶೀಘ್ರವೇ ಒಳ್ಳೆಯ ಸುದ್ದಿ ಕೊಡ್ತೀನಿ
ಶಿವಮೊಗ್ಗ: ಕಳೆದ ಒಂದೂವರೆ ವರ್ಷದಿಂದ ನಾನು ರಾಜಕಾರಣದಲ್ಲಿ ಖಾಲಿ ಕುಳಿತಿದ್ದೆ. ಖಾಲಿ ಕುಳಿತುಕೊಂಡು ನನಗೂ ಅಭ್ಯಾಸ ಇಲ್ಲ. ಇಂದು ನನ್ನ ಜನ್ಮ ದಿನವಿದ್ದು, ಈ ಜನ್ಮ ದಿನ ನನ್ನ ಬದಲಾವಣೆಗೆ ಕಾರಣವಾಗಲಿದೆ. ಆದಷ್ಟು ಬೇಗ ಬದಲಾವಣೆಯ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರ ಹಿತದೃಷ್ಟಿಯಿಂದ ಬದಲಾವಣೆ ಅನಿವಾರ್ಯ ಆಗಲಿದೆ. ನನ್ನ ಬದಲಾವಣೆಯ ನಿರ್ಧಾರ ಭವಿಷ್ಯದಲ್ಲಿ ಅನುಕೂಲ ಆಗಲಿದೆ ಎಂದರು.
ಜೆಡಿಎಸ್ ನಲ್ಲಿ ನನ್ನನ್ನು ಚೆನ್ನಾಗಿಯೇ ನಡೆಸಿಕೊಂಡಿದ್ದಾರೆ. ಆದರೆ ಜೆಡಿಎಸ್ ನಲ್ಲಿ ನಾಯಕರುಗಳು ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು. ಇದನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ. ಕುಮಾರಣ್ಣನನ್ನು ನಾನು ಹೆಚ್ಚು ಪ್ರೀತಿ ಮಾಡುತ್ತೇನೆ. ಆದರೆ ಪಕ್ಷದಲ್ಲಿ ಕೆಲವು ಆಂತರಿಕ ಸಮಸ್ಯೆಗಳಿವೆ. ಜೆಡಿಎಸ್ ನಲ್ಲಿ ಕಾರ್ಯಕರ್ತರನ್ನು ಪ್ರೀತಿಯಿಂದ, ಗೌರವದಿಂದ ಕಾಣುವುದಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಸ್ಥಾನಮಾನ ಸಿಗುವುದಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಪಕ್ಷದಿಂದ ಕಿತ್ತು ಹಾಕಲಿ: ಮಧು ಬಂಗಾರಪ್ಪ ಸವಾಲ್
ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಯಾರ ಬಳಿಯೂ ಇನ್ನು ಚರ್ಚೆ ಮಾಡಿಲ್ಲ. ಈ ಹಿಂದೆ ನಿರ್ಧಾರ ತೆಗೆದುಕೊಳ್ಳಲು ನನ್ನ ತಂದೆಯವರು ಇದ್ದರು. ಆದರೆ ಈ ಬಾರಿ ನನ್ನ ತಂದೆಯವರು ಇಲ್ಲದ ಸಂದರ್ಭದಲ್ಲಿ ನಾನೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಶಿವಮೊಗ್ಗದಿಂದಲೇ ನನ್ನ ಹೋರಾಟ ಆರಂಭ ಮಾಡುತ್ತೇನೆ. ನನ್ನ ರಾಜಕೀಯ ನಿರ್ಧಾರವನ್ನು ಶಿವಮೊಗ್ಗದಲ್ಲಿಯೇ ಕೈಗೊಳ್ಳುತ್ತೇನೆ. ಏನೇ ನಿರ್ಧಾರ ಕೈಗೊಂಡರು ಜಿಲ್ಲಾ ಪಂಚಾಯ್ತಿ ಚುನಾವಣೆಯೊಳಗೆಯೇ ಕೈಗೊಳ್ಳುತ್ತೇನೆ. ಒಳ್ಳೆಯ ಸುದ್ದಿಯನ್ನೇ ಕೊಡುತ್ತೇನೆ ಎಂದು ಮಧು ಬಂಗಾರಪ್ಪ ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಆಪರೇಷನ್ ಮಧು ಬಂಗಾರಪ್ಪ