– ಲವ್ ಅಂದ್ರೆ ಏನು ಅಂತ ಯುಪಿ ಸಿಎಂಗೆ ಗೊತ್ತಾ.?
– ಬಿಎಸ್‍ವೈ, ಮೋದಿ ಟೆಂಟಿಗೆ ಬೆಂಕಿ ಬಿದ್ದಿದೆ
– ಮುಸ್ಲಿಂ ಲೀಡರ್ ಆಗಲು ಆಸಕ್ತಿಯಿಲ್ಲ
ಬೆಂಗಳೂರು: ವಾಸ್ತವವಾಗಿ ಹೇಳಬೇಕೆಂದರೆ ಕಾಂಗ್ರೆಸ್ ತೊರೆದು ನಾನು ಜೆಡಿಎಸ್‍ಗೆ ಹೋಗುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಹೇಳುತ್ತಿರುವಂತೆ ನನಗೆ ಏನಾದರು ಆಗಬೇಕು ಎಂದು ಜೆಡಿಎಸ್ ಪಕ್ಷಕ್ಕೆ ನಾನು ಹೋಗುತ್ತಿಲ್ಲ. ದೇಶ ಮತ್ತು ರಾಜ್ಯಕ್ಕೆ ಏನಾದರೂ ಮಾಡಬೇಕು ಅಂತ ಹೋಗ್ತಿದ್ದೇನೆ ಎಂದು ತಿಳಿಸಿದರು.
Advertisement
ಇದೇ ವೇಳೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮದುವೆಯಾಗಿದ್ಯಾ?, ಅವರಿಗೆ ಲವ್ ಅಂದ್ರೆ ಏನು ಅಂತ ಗೊತ್ತಾ? ಹಾಗೆಯೇ ಅವರ ಪ್ರಕಾರ ಲವ್ ಜಿಹಾದ್ ಅಂದ್ರೆ ಏನು ಎಂದು ಇಬ್ರಾಹಿಂ ಪ್ರಶ್ನಿಸಿದ್ದಾರೆ.
Advertisement
Advertisement
ದೆಹಲಿಯಲ್ಲಿ ರೈತ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಲ್ಲಿ ರೈತರು ಬಹಳ ಸಂಕಷ್ಟದಲ್ಲಿ ಇದ್ದಾರೆ. ರಾಜ್ಯದಲ್ಲೂ ಇದೇ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಈಗಾಗಲೇ ನಾನು ರಾಜ್ಯದಲ್ಲಿ ಎಂಟು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ರಾಜ್ಯಕ್ಕೆ ಏನಾದರೂ ಒಳ್ಳೆಯದು ಆಗಬೇಕು. ಬೇಸಾಯಕ್ಕೆ ಎರಡು ಎತ್ತು ತರುತ್ತೇನೆ. ಯಡಿಯೂರಪ್ಪ ಉಳುಮೆ ಮಾಡುತ್ತಾರಾ..? ಸಿಎಂ ಯಡಿಯೂರಪ್ಪ ಕೇಶವಕೃಪದಲ್ಲಿಯೇ ಇದ್ದಾರೆ. ರೈತರ ಹಿತವನ್ನು ಮರೆತು ಗೋ ಹತ್ಯೆ ಕಾಯ್ದೆ, ಲವ್ ಜಿಹಾದ್ ಕಾಯ್ದೆ ಜಾರಿಗೆ ತರುವ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಶೀಘ್ರದಲ್ಲೇ ಶರದ್ ಪವಾರ್ ಭೇಟಿಯಾಗ್ತೀನಿ. ಬಿಹಾರಕ್ಕೂ ಹೋಗಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ಈಗ ಎಲ್ಲರೂ ಒಗ್ಗೂಡಿದ್ದಾರೆ. ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ ಎಂದರು.
Advertisement
ಕೆಟ್ಟ ಬುದ್ಧಿಯಿಂದಲೇ ರಾವಣ ಸತ್ತ, ಮಹಿಷಾಸುರ ನಾಶವಾದ. ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬರುವುದಿಲ್ಲ, ಉಪ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಹೇಳಿದ್ದೆ. ಅದರಂತೆ ಕಾಂಗ್ರಸ್ ಪಕ್ಷ ಇಂದು ಸೋತಿದೆ. ಹಾಗಂತ ನಾನು ಕಾಲಜ್ಞಾನ ಹೇಳುತ್ತಿಲ್ಲ. ನನಗೂ ದೇವರು ಒಂದಿಷ್ಟು ಜ್ಞಾನ ಕೊಟ್ಟಿದ್ದಾನೆ. ಸದ್ಯಕ್ಕೆ ನಾನು ಯಾವುದೇ ತಂತ್ರವನ್ನು ಬಿಟ್ಟುಕೊಡುವುದಿಲ್ಲ. ಈಗ ಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದರು.
ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂತ ಯಾರಿಗಾದ್ರೂ ಗೊತ್ತಿತ್ತಾ..? ಅವರು ಚಾಮುಂಡಿಯಲ್ಲಿ ಸೋಲುವುದು ತಿಳಿದು ಬಾದಾಮಿಗೆ ಹೋಗಲು ಹೇಳಿದ್ದೆ. ಡಿಸೆಂಬರ್ ಬಂದರೆ ರಾಜಕೀಯದಲ್ಲಿ ಕೂಡ ಬದಲಾವಣೆ ಆಗುವುದಾಗಿ ತಿಳಿಸಿದ್ದೆ. ಅದರಂತೆಯೇ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಯಡಿಯೂರಪ್ಪ ಹಾಗೂ ಮೋದಿ ಟೆಂಟಿಗೆ ಬೆಂಕಿ ಬಿದ್ದಿದೆ. ಇದೀಗ ಎಲ್ಲರೂ ಬದುಕಿದ್ರೆ ಸಾಕಪ್ಪ ಎಂದು ಓಡಿ ಹೋಗ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಅಪ್ಪ-ಮಕ್ಕಳು ಜೆಡಿಎಸ್ ಪಕ್ಷದಲ್ಲಿ ಮಾತ್ರ ಇದ್ದಾರಾ? ಅಪ್ಪ-ಮಕ್ಕಳ ಪಕ್ಷ ಕಾಂಗ್ರಸ್ಸಿನಲ್ಲಿ ಇಲ್ವಾ, ಆರ್.ಜೆ.ಡಿಯಲ್ಲಿ ಇಲ್ವಾ ಎಂದು ಹೇಳುವ ಮೂಲಕ ರೈತರು ಮುಂದಿನ ಬೆಳೆ ಬೆಳೆಯೋಕೆ ಬೀಜ ಇಟ್ಟುಕೊಂಡಿರುತ್ತಾರೋ ಹಾಗೆಯೇ ದೇವೇಗೌಡರು ಪಕ್ಷ ಕಟ್ಟಲು ಉತ್ತಮ ಸಂಕಲ್ಪ ಇಟ್ಕೊಂಡಿದ್ದಾರೆ. ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಜೆಡಿಎಸ್‍ಗೆ ಸೇರಿಕೊಳ್ಳಲು ಇನ್ನೂ ಸಮಯಾವಕಾಶವಿದೆ. ಪ್ರಭಾಕರ್ ಕೋರೆ, ಉಮೇಶ್ ಕತ್ತಿ ನನ್ನನ್ನು ಭೇಟಿ ಮಾಡಿ ಮತನಾಡಿದ್ದು ನಿಜ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಕೂಡ ನನಗೆ ಒಳ್ಳೆಯ ಸ್ನೇಹಿತರು. ಅರ್ ಎಸ್ ಎಸ್ ನವರು ಕೂಡ ನನಗೆ ಸ್ನೇಹಿತರು. ಅನೇಕರು ನನ್ನ ಮನೆಗೆ ಬಂದಿದ್ದಾರೆ ಎಂದು ಹೇಳಿದರು.
ನಾನು ಮನಸ್ಸು ಮಾಡಿದ್ದರೆ ಯಾವತ್ತೋ ಮುಸ್ಲಿಂ ಲೀಡರ್ ಆಗ್ತಿದ್ದೆ. ನನಗೆ ಈ ಬಗ್ಗೆ ಯಾವುದೇ ಆಸೆಗಳಿಲ್ಲ. ವಾಸ್ತವಾಗಿ ನನಗೆ ಹೇಳಲು ಯಾವುದೇ ಭಯವಿಲ್ಲ ನಾನು ಕಾಂಗ್ರೆಸ್ ಬಿಟ್ಟು ಜೆಡಿಎಸ್‍ಗೆ ಹೋಗುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.