-ತಾಕತ್ತಿದ್ರೆ ಕಾಂಗ್ರೆಸ್ ಮುಂದಿನ ಸಿಎಂ ಯಾರು ಅಂತ ಬಹಿರಂಗಪಡಿಸಲಿ
– ಬಿಜೆಪಿ ಅಧರ್ಮದ ಪರ ಎಂದು ನಿಲ್ಲಲ್ಲ
ಚಿತ್ರದುರ್ಗ: ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ಮಾಡಿದ್ದಾರೆ.
ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಆಗುವ ಕನಸು ಕಾಣುತ್ತಿರುವ ಡಿಕೆಶಿ, ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಮತ್ತು ಸಿಎಂ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲೇ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಅಗಲಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಾಕಿದ ನಾಯಿಯನ್ನು ಕಚ್ಚಿದ್ದಕ್ಕೆ ಬೀದಿ ನಾಯಿಯನ್ನೇ ಕೊಲೆಗೈದ
ದಿನನಿತ್ಯ ಬಿಜೆಪಿಯಲ್ಲಿ ಕಚ್ಚಾಟ ಆಗ್ತಾ ಇದೆ. ಹೀಗಾಗಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಹೇಳಿರುವ ಕಾಂಗ್ರೆಸ್ ನಾಯಕರ ಹೇಳಿಕೆ ನಗೆಪಟಲಿಗೆ ಬಿದ್ದಂತಿದ್ದು, ಸಿಎಂ ನಾನಾಗಬೇಕೆಂಬ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಕಿತ್ತಾಡುತ್ತಾ ದಿವಾಳಿ ಆಗಿದ್ದಾರೆ ಎಂಬುದನ್ನು ತೋರಿಸುತ್ತಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಸಿಎಂ ಯಾರು ಅಂತ ತಾಕತ್ತಿದ್ರೆ ಬಹಿರಂಗಪಡಿಸಲಿ. ನಮ್ಮ ಸರ್ಕಾರದ ವಿರುದ್ಧ ಇಷ್ಟೆಲ್ಲಾ ಆರೋಪ ಮಾಡುವ ಕೈ ನಾಯಕರು, ಅಧಿಕಾರದ ದಾಹದಿಂದ ಹಗಲು ಕನಸು ಕಾಣುತಿದ್ದಾರೆ. ಹೀಗಾಗಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಯಾರಾಗುತ್ತಾರೆ ಎಂಬುದನ್ನು ತಾಕತ್ತಿದ್ದರೆ ಮೊದಲು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್ಗೆ ಇನ್ನೂ ವಯಸ್ಸಿದ್ದು, ಸಿದ್ದರಾಮಯ್ಯ ಸಿಎಂ ಆಗಲಿ: ರಾಮಪ್ಪ
ಇದೇ ವೇಳೆ ಸಿಡಿ ಲೇಡಿ ವಿಚಾರವಾಗಿ ಮಾತನಾಡಿದ ಅವರು ಮಾಜಿ ಸಚಿವ ರಮೇಶ್ ಜಾರಕಿ ಹೋಳಿ ಅವರನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂಬ ವಿಚಾರದಲ್ಲಿ ಹುರುಳಿಲ್ಲ. ಬಿಜೆಪಿ ಸರ್ಕಾರ ಧರ್ಮದ ಬಗ್ಗೆ ಕೆಲಸ ಮಾಡುತ್ತದೆ. ಅಧರ್ಮದ ಪರ ಎಂದು ನಿಲ್ಲುವುದಿಲ್ಲ. ಈಗಾಗಲೇ ಪ್ರಕರಣ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರವೇ ಎಲ್ಲಾ ನಡೆಯಲಿದೆ. ಜೊತೆಗೆ ಡೆಲ್ಟಾ ಪ್ಲಸ್ ಪ್ರಕರಣ ರಾಜ್ಯದಲ್ಲಿ ಮೈಸೂರು ಹಾಗೂ ಬೆಂಗಳೂರಲ್ಲಿ ಪತ್ತೆ ಆಗಿದೆ. ಚಿಕಿತ್ಸೆ ಕೂಡ ನಡೆಯುತ್ತಿದೆ. ಈ ಬಗ್ಗೆ ಸಂಶೋಧನೆ ನಡೆಸಿ ನಂತರ ಔಷಧಿ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.