ಚಿಕ್ಕಬಳ್ಳಾಪುರ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಎಷ್ಟು ಸಲ ಮದುವೆಯಾಗೋದು? ಡೈವೋರ್ಸ್ ಆಗೋದು ಎಷ್ಟು ಸಲ ಎಂದು ಪ್ರಶ್ನಿಸುವ ಮೂಲಕ ಆರೋಗ್ಯ ಸಚಿವ ಸುಧಾಕರ್ ವ್ಯಂಗ್ಯವಾಡಿದ್ದಾರೆ.
ಮಾಜಿ ಸಿಎಂಗಳಾದ ಎಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಆರೋಪ-ಪ್ರತ್ಯಾರೋಪಗಳ ಸಂಬಂಧ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದಾಗ ಇದೊಂದು ಅನೈತಿಕ ಸಂಬಂಧ ಎಂದು ನಾನು ಮೊದಲೇ ಹೇಳಿದ್ದೆ. ಜನಾಭಿಪ್ರಾಯಕ್ಕೆ ವಿರುದ್ದವಾದ ಸರ್ಕಾರ. ಆದರೆ ಈಗ ಅವರೇ ಈ ಸತ್ಯವನ್ನ ಒಪ್ಪಿಕೊಂಡಿದ್ದಾರೆ. ಇದು ಬಹಳ ಸಂತೋಷ ಹಾಗೂ ಸ್ವಾಗತಾರ್ಹ ಎಂದರು.
ಮುಂದೆಯಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ತಮ್ಮ ತಮ್ಮ ಧೋರಣೆ ನಿಲುವುಗಳಿಗೆ ತಕ್ಕ ಹಾಗೆ ಜನರ ಮುಂದೆ ಹೋಗಲಿ. ಮುಂದಿನ ದಿನಗಳಲ್ಲಿ ಮತ್ತೆ ಪರಸ್ಪರ ಒಂದಾಗದಿರಲಿ. ಆಗ ಮಾತ್ರ ಅವರಿಗೆ ಗೌರವ ಉಳಿಯುತ್ತೆ ಎಂದು ಹೇಳಿದರು.
ಮದುವೆ ಆಗಿ ಹೋಗಿದೆ. ಯಡಿಯೂರಪ್ಪ ಸಿಎಂ ಆಗಿಯೂ ಆಗಿದೆ. ಎಚ್‍ಡಿಕೆ ಒಂದೇ ವರ್ಷ ಸಿಎಂ ಆಗಬೇಕು ಅಂತ ಬರೆದಿತ್ತು. ಇದೆಲ್ಲಾ ವಿಧಿಯಾಟ ಈಗ ಏನೂ ಮಾಡಲು ಆಗುವುದಿಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಿಎಂ ಹಾಗೂ ಬಿಜೆಪಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳು ಚರ್ಚೆ ಮಾಡಿ ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಸೂಕ್ತ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಉತ್ತರಿಸಿದರು.
ಇದೇ ವೇಳೆ ತೆಲಂಗಾಣದ ಹೈದರಾಬಾದ್ ಮಹನಾಗರ ಪಾಲಿಕೆ ಚುನಾವಣಾ ಫಲಿತಾಂಶದ ಪ್ರತಿಕ್ರಿಯಿಸಿ, ಫಲಿತಾಂಶ ನಿರೀಕ್ಷೆಯಂತೆ ಹೆಚ್ಚಿನ ಮತಗಳು ಬಂದಿರುವುದು ಸಂತೋಷ ತಂದಿದೆ. ಶೇ.10 ರಷ್ಟು ಇದ್ದ ಮತಗಳು ಈಗ ಶೇ.36 ರಷ್ಟು ಬಂದಿವೆ. ಜನ ಟಿಆರ್‍ಎಸ್‍ನ ದುರಾಡಳಿತ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ದ ಸೆಣಸಾಡಿ ಬಿಜೆಪಿಗೆ ಬೆಂಬಲಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೇರಲಿದೆ ಎಂದು ಡಾ. ಕೆ ಸುಧಾಕರ್ ಭವಿಷ್ಯ ನುಡಿದರು.