ಬೆಂಗಳೂರು : ಕೊರೊನಾ ಸಂಕಷ್ಟ ಸಮಯದಲ್ಲಿ ರಕ್ತದ ಕೊರತೆ ಉಂಟಾಗಿದ್ದ ಪರಿಣಾಮವನ್ನು ಅರಿತು ಇಂದು ಶೇಷಾದ್ರಿಪುರಂ ಕಾಲೇಜು ಶಿಕ್ಷಣ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಮಾಡುವುದು ಬ್ರಹ್ಮ ವಿದ್ಯೆಯಲ್ಲ, ಕಷ್ಟದಲ್ಲಿರುವವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಕ್ತದಾನ ಮಾಡಿ ಎಂದು ನಟ ವಿಜಯ್ ರಾಘವೇಂದ್ರ ಮನವಿ ಮಾಡಿಕೊಂಡರು.
ಶೇಷಾದ್ರಿಪುರಂ ಕಾಲೇಜು ಶಿಕ್ಷಣ ಸಂಸ್ಥೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಬರೋಬ್ಬರಿ 560 ಯೂನಿಟ್ ರಕ್ತವನ್ನು ಸಂಗ್ರಹ ಮಾಡಲಾಗಿದೆ.
ಪ್ರತಿವರ್ಷ ಶೇಷಾದ್ರಿಪುರಂ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಸಲಾಗುತಿತ್ತು. ಈ ವರ್ಷದ ರಕ್ತದಾನ ಶಿಬಿರ ಇಂದು ನಡೆದಿದೆ. ನಟ ವಿಜಯ್ ರಾಘವೇಂದ್ರ ರಕ್ತದಾನ ಶಿಬಿರ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡೋದು ಆರೋಗ್ಯಕರ. ಅಗತ್ಯ ಇರುವವರಿಗೆ ರಕ್ತದಾನ ಸಹಾಯವಾಗಲಿ. ಹೆದರಿಕೆ ಬೇಡ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನವನ್ನು ಮಾಡುವುದರ ಮೂಲಕ ಒಂದೊಳ್ಳೆ ಕೆಲಸಕ್ಕೆ ಸಾಕ್ಷಿಯಾದರು. ಕೊರೊನಾ ನಂತರ ಬೆಂಗಳೂರಿನಲ್ಲಿ ರಕ್ತದಾನ ಮಾಡುವವರ ಸಂಖ್ಯೆ ತುಂಬಾ ವಿರಳವಾಗಿತ್ತು. ಇದರಿಂದ ನಗರದಲ್ಲಿ ರಕ್ತದ ಕೊರತೆಯೂ ಸಾಕಷ್ಟು ಕಾಡಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಲೇಜಿನ ಕ್ಯಾಂಪಸ್ ಮೂಲಕ ರಕ್ತದಾನ ಶಿಬಿರ ಕಾರ್ಯಕ್ರಮಗಳು ಹಲವು ಜೀವಗಳನ್ನು ಉಳಿಸಲಿವೆ.