ಮಡಿಕೇರಿ: ಕೊರೊನಾ ಎರಡನೇ ಅಲೆಯಿಂದ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ಸ್ಯಾಂಡಲ್‍ವುಡ್ ಕಲಾವಿದರಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊಡಗಿನ ಜನರಿಗೆ ಸಹಾಯ ಮಾಡಿದ್ದಾರೆ.
ಕೊರೊನಾ ಕಾಲದಲ್ಲಿ ಕೆಲವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಮತ್ತೊಂದೆಡೆ ಆಕ್ಸಿಜನ್, ಬೆಡ್ ಇಲ್ಲದೆ ಅನೇಕರು ನಿಧನರಾಗಿದ್ದಾರೆ. ಇಂತಹವರಿಗೆ ಕೊರೊನಾ ವಿರುದ್ಧ ಹೋರಾಡಲು ಸ್ಯಾಂಡಲ್‍ವುಡ್‍ನ ಕೆಲ ಸೆಲಿಬ್ರೆಟಿಗಳು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಕಳೆದ ವರ್ಷ ಚಂದನವನದ ಹಲವರು ಉದ್ಯೋಗವಿಲ್ಲದವರಿಗೆ ದಿನಸಿ ಕಿಟ್ ನೀಡುವುದು ಹಾಗೂ ಇತರೆ ನೆರವು ನೀಡುವಲ್ಲಿ ಮುಂಚೂಣಿಯಲ್ಲಿದ್ದರು.
ಹಾಗೆಯೇ ಈ ಬಾರಿ ಕೊಡಗಿನ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊರೊನಾ ವಾರಿಯರ್‌ಗಳಂತೆ ಕೆಲಸ ಮಾಡುತ್ತಿದ್ದಾರೆ. ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ‘ಭುವನಂ ಕೋವಿಡ್ ಹೆಲ್ಪ್ 24/7’ ಎಂಬ ಟ್ರಸ್ಟ್ ಆರಂಭಿಸಿ ಸೋಂಕಿತರಿಗೆ ಸಹಾಯ ಮಾಡುವ ಮೂಲಕ ಇಬ್ಬರು ಕೊಡಗಿನ ಸೇವೆಗೆ ಮುಂದಾಗಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಭಾಂದವ ಫೌಂಡೇಷನ್ ಹೆಸರಿನ ಮೂಲಕ ಕೊಡಗಿನ ಜನರ ನೆರವಿಗೆ ನಿಂತಿದ್ದು, ಬಡವರು, ನಿರ್ಗತಿಕರಿಗೆ ಹದಿನೈದು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ಕಿಟ್‍ನನ್ನು ವಿತರಣೆ ಮಾಡುತ್ತಿದ್ದಾರೆ. ಎರಡು ವಾರಗಳ ಕಾಲ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿರುವ ‘ಭುವನಂ ಫೌಂಡೇಷನ್’ಗೆ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ನಲ್ಲಿ ಚಾಲನೆ ನೀಡಲಾಯಿತು. ಸ್ಥಳೀಯರಿಗೆ ಮತ್ತು ಹೋಂ ಗಾರ್ಡ್‍ಗಳಿಗೆ ಆಹಾರ ಪದಾರ್ಥಗಳ ಕಿಟ್ ಮತ್ತು ಮಾಸ್ಕ್ ಅನ್ನು ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ವಿತರಣೆ ಮಾಡಿದ್ದಾರೆ.
ಈ ಸಂದರ್ಭ ನಗರ ಸಭೆ ಆಯುಕ್ತ ರಾಮದಾಸ್ ಜೊತೆಗಿದ್ದು, ನಗರದಲ್ಲಿ ಆಹಾರ ಪದಾರ್ಥಗಳ ಕಿಟ್ ಬೇಕಾಗಿರುವ ಏರಿಯಾಗಳಿಗೆ ಕರೆದೊಯ್ದು ಕುದ್ದು ನಿಂತು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಸಿದರು. ಈ ಸಂದರ್ಭ ಮಾತನಾಡಿದ ಭುವನ್ ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಔಷಧಿ ಕೊಳ್ಳಲು 15, 20 ಕಿಲೋಮೀಟರ್ ಹೋಗಬೇಕಾಗಿದೆ. ಇನ್ನು ಕೋವಿಡ್ ಎಂದ ಕೂಡಲೇ ಯಾರೂ ಆಟೋದವರು ಬರುವುದಿಲ್ಲ. ಹೀಗಾಗಿಯೇ ನಮ್ಮದೇ ತಂಡ ಇಂತಹವರ ನೆರವಿಗೆ ಧಾವಿಸಲಿದೆ. ಅಲ್ಲದೆ ಆಹಾರ ಪದಾರ್ಥಗಳು ಬೇಕಾದಲ್ಲಿ ಒದಗಿಸಲಿದೆ ಎಂದರು.
ನಟಿ ಹರ್ಷಿಕಾ ಪೂಣಚ್ಚ, ಕೊಡಗಿನಲ್ಲಿ ನೆರೆ ಆಗುತ್ತಿದ್ದಂತೆ ಫೀಡ್ ಕರ್ನಾಟಕ ಆರಂಭಿಸಿದ್ದೇವೆ. ಕೊಡಗಿನ ಜನರಿಗೆ ಔಷಧಿ ಅಗತ್ಯ ಇರುವುದರಿಂದ ಸೇವೆಯನ್ನು ಒದಗಿಸಲಿದ್ದೇವೆ ಎಂದು ಹೇಳಿದ್ದಾರೆ.