ಧಾರವಾಡ/ಹುಬ್ಬಳ್ಳಿ: ಹಾರ್ಡ್‍ವೇರ್ ಅಂಗಡಿ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳನೊಬ್ಬನಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಹೀಗಾಗಿ ಹುಬ್ಬಳ್ಳಿ ಪೊಲೀಸರಿಗೂ ಸಹ ಇದೀಗ ಢವಢವ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆಯನ್ನ ಸೀಲ್ ಡೌನ್ ಮಾಡಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಹಾರ್ಡ್‍ವೇರ್ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಕಳ್ಳತನಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಪೊಲೀಸರು ಕೂಡಾ ಕಳ್ಳತನ ಮಾಡಿದ 54 ವರ್ಷದ ಆರೋಪಿಯನ್ನು ಬಂಧಿಸಿದ್ದರು. ಆದ್ರೆ ಆರೋಪಿಯಿಂದ ಕಳ್ಳತನದ ಮಾಲನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೇಳೆ ಕಳ್ಳತನದ ಆರೋಪಿಗೆ ಕೊರೊನಾ ಇರೋದು ಖಚಿತವಾಗಿದೆ.
ಕಳ್ಳತನದ ಆರೋಪಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆ ಸೀಲ್‍ಡೌನ್ ಮಾಡಿದ್ದು, ಇದೀಗ ಇಲ್ಲಿ ಕಾರ್ಯ ನಿರ್ವಹಿಸಿದ ಪೊಲೀಸರಿಗೂ ಹಾಗೂ ಕಳ್ಳನನ್ನ ವಿಚಾರಣೆಗೆ ಒಳಪಡಿಸಿದ ಸಿಬ್ಬಂದಿಗಳಿಗೂ ಕೂಡಾ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸರಿಗೆ ಕ್ವಾರಂಟೈನ್ ಮಾಡಿ ಪೊಲೀಸ್ ಠಾಣೆಯನ್ನ ಸ್ಯಾನಿಟೈಜ್ ಮಾಡಲಾಗಿದೆ. ಪೊಲೀಸರು ಸಹ ಠಾಣೆಯ ಹೊರ ಆವರಣದಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದಾರೆ.