ಬೆಂಗಳೂರು: ಕಳೆದ 10 ದಿನಗಳಿಂದ ಕೊರೊನಾ ಮತ್ತು ಲಾಕ್‍ಡೌನ್ ಭಯದಿಂದ ಇದುವರೆಗೂ ಬರೋಬ್ಬರಿ 7.5 ಲಕ್ಷ ಜನರು ಬೆಂಗಳೂರು ತೊರೆದು ತಮ್ಮ ತಮ್ಮ ಊರುಗಳತ್ತ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಕಳೆದ 10 ದಿನಗಳಿಂದ ಬರೋಬ್ಬರಿ 7.5 ಲಕ್ಷ ಜನರು ಬೆಂಗಳೂರನ್ನು ಖಾಲಿ ಮಾಡಿದ್ದಾರೆ. ಇದರಲ್ಲಿ 4.5 ಲಕ್ಷ ಜನ ಮನೆ ಸಮೇತ ಖಾಲಿ ಮಾಡಿದ್ದಾರೆ ಎಂದು ಸರ್ಕಾರದ ಮುಂದೆ ಗೃಹ ಇಲಾಖೆ ಲೆಕ್ಕ ನೀಡಿದೆ. ಅಂದಾಜಿನ ಮೂಲಕ ಗೃಹ ಇಲಾಖೆ ಈ ಲೆಕ್ಕವನ್ನು ಸರ್ಕಾರದ ಮುಂದೆ ಇಟ್ಟಿದೆ.
ಅದರಲ್ಲೂ ಶುಕ್ರವಾರ, ಶನಿವಾರ ಮತ್ತು ಸೋಮವಾರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಗಳೂರಿನಿಂದ ವಲಸೆ ಹೋಗಿದ್ದಾರೆ. ಕಳೆದ ವಾರ ಒಂದೂವರೆ ಲಕ್ಷ ಜನ ಹೋಗಿದ್ದಾರೆ ಎಂದು ಅಂದಾಜು ಮಾಡಲಾಗಿತ್ತು. ಈ ಅಂದಾಜಿನ ಲೆಕ್ಕ ಈಗ ಮೂರು ಪಟ್ಟು ಹೆಚ್ಚಾಗಿದೆ.
ಕೊರೊನಾ ಮತ್ತು ಮತ್ತೆ ಲಾಕ್‍ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಲಕ್ಷಾಂತರ ಜನರು ಈಗಾಗಲೇ ಬೆಂಗಳೂರು ಬಿಟ್ಟು ಹೋಗಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‍ಡೌನ್ ಆಗಲಿದೆ. ಹೀಗಾಗಿ ಕಳೆದ ದಿನದಿಂದ ಜನರು ಮನೆ ಸಾಮಾನು ಸಮೇತ ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಕೆಲವರು ಬೆಂಗಳೂರು ಸಹವಾಸ ಬೇಡ ಎಂದು ಹೋಗುತ್ತಿದ್ದಾರೆ. ಇನ್ನೂ ಕೆಲವರು ಒಂದು ವಾರ ಲಾಕ್‍ಡೌನ್ ಇದೆ. ಮಾಡಲು ಕೆಲಸವಿಲ್ಲದೆ ಏನ್ ಮಾಡುವುದು ಎಂದು ತಮ್ಮ ಗ್ರಾಮಗಳಿಗೆ ಹೋಗಿದ್ದಾರೆ.
ಜನರು ಬೆಂಗಳೂರಿನಿಂದ ಹೋಗುತ್ತಿರುವ ಪರಿಣಾಮ ಮೈಸೂರು ರಸ್ತೆ, ತುಮಕೂರು ರಸ್ತೆ, ನವಯುಗ ಟೋಲ್, ಮೆಜೆಸ್ಟಿಕ್ ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಅಲ್ಲದೇ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದೆ. ಹೆಚ್ಚಿನ ಜನರು ಬೆಂಗಳೂರಿನಿಂದ ಉರುಗಳತ್ತ ಪ್ರಯಾಣ ಬೆಳೆಸಿದ ಪರಿಣಾಮ ಪ್ರಯಾಣಿಕರು ಬಸ್ ಇಲ್ಲದೆ ಪರದಾಡಬಾರದು ಎಂದು ಹೆಚ್ಚುವರಿ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ.