– ಮಕ್ಕಳು ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದುವುದು ಸರಿಯಲ್ಲ
ಬೆಂಗಳೂರು: ಕಲಿಕಾ ರಹಿತ ವರ್ಷ(zero academic year)ದ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ, ಇಲಾಖೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಯಾವುದೇ ತರಗತಿಯ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಶಿಕ್ಷಣ ಇಲಾಖೆಯು ಪರ್ಯಾಯ ಬೋಧನಾ ಕ್ರಮಗಳನ್ನು ಚಾಲನೆಯಲ್ಲಿಟ್ಟಿದೆ. ಇಂದಿನಿಂದ ಚಂದನ ವಾಹಿನಿಯಲ್ಲಿ ಪ್ರಾರಂಭವಾಗಿರುವ ಐದರಿಂದ ಏಳನೇ ತರಗತಿಯ ಬೋಧನಾ ತರಗತಿಗಳು ಈ ಪ್ರಯತ್ನದ ಭಾಗವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಎಲ್ಲ ತರಗತಿಗಳ ಮಕ್ಕಳಿಗೆ ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. ಶಾಲೆಗಳಲ್ಲಿ ಶಿಕ್ಷಕರು ಹಾಜರಾಗುವ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಪರಾಮರ್ಶಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಖಚಿತ ಜವಾಬ್ದಾರಿಯನ್ನು ನಿರ್ವಹಿಸಿ, ಎಲ್ಲ ತರಗತಿಗಳ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಲಿದ್ದಾರೆ. ಖಾಸಗಿ ಶಾಲೆಗಳು ಅನುಸರಿಸುತ್ತಿರುವ ಪರ್ಯಾಯ ಕ್ರಮಗಳೂ ಸಹ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೇರೇಪಿಸುವಂತಹವೇ ಆಗಿದೆ. ಯಾವ ವಿದ್ಯಾರ್ಥಿಯೂ ಕಲಿಕೆಯ ಅವಕಾಶದಿಂದ ವಂಚನೆಗೊಳಗಾಗಿಲ್ಲ. ಹೀಗಾಗಿ ಈ ವರ್ಷವನ್ನು ಕಲಿಕಾರಹಿತ ವರ್ಷ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಶಾಲಾ ವಾತಾವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಮುಕ್ತ ಮನಸ್ಸನ್ನು ಹೊಂದಿದೆ ಎಂದೂ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ತಮ್ಮ ಫೇಸ್ಬುಕ್ ಖಾತೆ ಮೂಲಕ ಸಹ ಸ್ಪಷ್ಟಪಡಿಸಿದ್ದಾರೆ.
ಫೇಸ್ಬುಕ್‍ನಲ್ಲಿ ಪೋಸ್ಟ್ ನಲ್ಲಿ ಏನಿದೆ?
ಶೈಕ್ಷಣಿಕ ಶೂನ್ಯ ಕಲಿಕಾ ವರ್ಷ ಅಥವಾ zero academic year ಎಂಬ ಪದ ಇತ್ತೀಚೆಗೆ ಹುಟ್ಟಿದೆ. ಈ ಕುರಿತು ಅನಗತ್ಯ ಗೊಂದಲ ಉಂಟಾಗುತ್ತಿದೆ. ಶೂನ್ಯ ಕಲಿಕಾ ವರ್ಷ ಎಂಬ ಕಲ್ಪನೆ ಸಹ ಶಿಕ್ಷಣ ಇಲಾಖೆಯಲ್ಲಿ ಇಲ್ಲ. ನಾನು ಇಂದು ಈ ಕುರಿತು ಬಹಳ ಸ್ಪಷ್ಟವಾಗಿ ತಿಳಿಸಿದ್ದೇನೆ.
ಈಗಾಗಲೇ ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ನಾವು ವಿವಿಧ ರೀತಿಯಲ್ಲಿ ಮಕ್ಕಳಿಗೆ ಪಾಠ ಕಲಿಸಿದ್ದೇವೆ. ಕೆಲವು ಶಾಲೆಗಳು ಆನ್‍ಲೈನ್ ಮೂಲಕ ಶಿಕ್ಷಣ ನೀಡಿವೆ. ಇನ್ನುಳಿದ ಶಾಲೆಗಳಲ್ಲಿ ದೂರದರ್ಶನ ಚಂದನ ವಾಹಿನಿ ಮೂಲಕ ಹಾಗೂ ಆಯಾ ಶಾಲೆಗಳ ಶಿಕ್ಷಕರು ಸುಮಾರು ಮೂರೂವರೆ ತಿಂಗಳ ಕಾಲ ನಡೆಸಿದ ವಿದ್ಯಾಗಮ ಕಾರ್ಯಕ್ರಮದ ಮೂಲಕ ಈ ತರಗತಿಯ ಮಕ್ಕಳಿಗೆ ಪಾಠವನ್ನು ಹೇಳಿಕೊಡಲಾಗುತ್ತಿದೆ.
ಶೈಕ್ಷಣಿಕ #ಶೂನ್ಯ_ಕಲಿಕಾ_ವರ್ಷ ಅಥವಾ #zero_academic_year ಎಂಬ ಪದ ಇತ್ತೀಚೆಗೆ ಹುಟ್ಟಿದೆ. ಮತ್ತು ಈ ಕುರಿತು ಅನಗತ್ಯ ಗೊಂದಲ…
Posted by Suresh Kumar S on Monday, November 23, 2020
ಇಂದಿನಿಂದ 5,6 ಮತ್ತು 7ನೇ ತರಗತಿಗಳಿಗೆ ಪ್ರತಿದಿನ ಚಂದನ ವಾಹಿನಿಯ ‘ಸಂವೇದ’ ಕಾರ್ಯಕ್ರಮದ ಮೂಲಕ ನಿಗದಿತ ವೇಳೆಯಲ್ಲಿ ಪಾಠ ಪ್ರಾರಂಭವಾಗಿದೆ. ರಾಜ್ಯದ ಎಲ್ಲ ಮಕ್ಕಳಿಗೂ ಪಠ್ಯ ಪುಸ್ತಕಗಳನ್ನು ಜೂನ್-ಜುಲೈ ತಿಂಗಳಲ್ಲೇ ತಲುಪಿಸಲಾಗಿದೆ. ಇಷ್ಟೆಲ್ಲ ಆದ ನಂತರವೂ ತಮ್ಮದಲ್ಲದ ತಪ್ಪಿಗೆ ಮಕ್ಕಳು ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದಬೇಕು ಎನ್ನುವುದು ಸರಿಯಲ್ಲ. ಹಿಂದಿನ ವರ್ಷ ಸಹ ಒಂದನೇ ತರಗತಿಯಿಂದ 9ರವರೆಗೂ ಪರೀಕ್ಷೆ ಇಲ್ಲದೆ ಎಲ್ಲ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗಿತ್ತು. ಯಾವುದೇ ಕಾರಣಕ್ಕೂ ಯಾವುದೇ ಶಾಲೆಯಲ್ಲಿ ಯಾವುದೇ ತರಗತಿಗಳಿಗೆ ಶೂನ್ಯ ವರ್ಷ ಎಂಬುದು ಇಲ್ಲ, ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ.