ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಕಲಬುರಗಿ ಜಿಲ್ಲೆಯನ್ನು ಮುಂದಿನ 30 ವಷ9ದೊಳಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸರ್ವಾಂಗೀಣ ಅಭಿವೃದ್ಧಿ ಪಡಿಸುವ ಸದುದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿಗೆ “ಕಲಬುರಗಿ ವಿಜನ್-2050” ಎಂಬ ವಿನೂತನ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಪ್ರಕಟಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದಿರುವ ಕಲಬುರಗಿ ಜಿಲ್ಲೆಯನ್ನು ಇನ್ನು ಮೂರು ದಶಕದೊಳಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಪಡಿಸಲು ಕಲಬುರಗಿ ವಿಜನ್-2050 ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಒಂದು ಜಿಲ್ಲೆಯನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಲು ಹಾಕಿಕೊಂಡಿರುವ ಯೋಜನೆ ರಾಜ್ಯದಲ್ಲಿ ಪ್ರಪ್ರಥಮವಾಗಿ ಕಲಬುರಗಿಯಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿದರು.
“ಕಲಬುರಗಿ ವಿಜನ್-2050” ನಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಮುಂತಾದ ಕ್ಷೇತ್ರಗಳ 15 ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಸ್ಥಳೀಯ ಶಾಸಕರು, ನಿವೃತ್ತಿ ಹೊಂದಿದವರು, ಆಯಾ ಕ್ಷೇತ್ರಗಳಲ್ಲಿ ಅನುಭವ-ಪರಿಣತಿ ಹೊಂದಿರುವವರು ಸೇರಿಸಿಕೊಳ್ಳಲಾಗುವುದು. ಆಯಾ ಇಲಾಖೆಯ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ಆಯಾ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳನ್ನಾಗಿ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಈ ಎಲ್ಲಾ ಸಮಿತಿಯ ಅಧ್ಯಕ್ಷರುಗಳು ಪ್ರಧಾನ ಸಮಿತಿ ಸದಸ್ಯರಾಗಿರುತ್ತಾರೆ. ಪ್ರಧಾನ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು ಮುಂತಾದವರು ಸದಸ್ಯರಿರುತ್ತಾರೆ ಎಂದು ವಿವರಿಸಿದರು.
ಎಲ್ಲಾ ಇಲಾಖೆಗಳಲ್ಲಿ ಸಮನ್ವಯತೆ ಸಾಧಿಸುವುದರ ಜೊತೆಗೆ ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿ ರಚನೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಜಿಲ್ಲೆಗೆ ಪೂರಕವಾಗಿ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಿ ಕಾಲಮಿತಿಯೊಳಗೆ ಅನುಷ್ಠಾನ ಮಾಡುವುದು ಇದರ ಉದ್ದೇಶ ಎಂದರು.
ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಕೆ ಮಾಡಿಕೊಂಡು ಗುಡಿ, ಸಣ್ಣ ಮತ್ತು ಬೃಹತ್ ಕೈಗಾರಿಕೆಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತದೆ ಎಂದರು ನಿರಾಣಿ.
ಯಾವುದೇ ಫಲಾಪೇಕ್ಷೆ ಬಯಸದ ಕಲಬುರಗಿ ಜಿಲ್ಲೆಯ ಬುದ್ಧಿಜೀವಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು. ರಾಜ್ಯದ ನಿವೃತ್ತ ಮುಖ್ಯಕಾರ್ಯದರ್ಶಿ ರಂಗನಾಥ್, ಹಿರಿಯ ಐಎಎಸ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಅವರು ಈ ಕಾರ್ಯಕ್ಕೆ ನೆರವಾಗಲು ಮುಂದೆ ಬಂದಿದ್ದಾರೆ ಎಂದು ಸಚಿವರು ಹೇಳಿದರು. ಸಮಿತಿ ರಚನೆಯಾದ ಮೇಲೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಮುಖರಿಂದ ಸದಸ್ಯರಿಗೆ ತರಬೇತಿ ಕೊಡಿಸಲಾಗುವುದು ಎಂದರು.
“ಕಲಬುರಗಿ ವಿಜನ್-2050” ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡುವುದಿದೆ. ಭಾರತ ಸೇರಿದಂತೆ 154 ದೇಶಗಳಲ್ಲಿ ಕನ್ಸಲ್ಟೆನ್ಸಿ ಸೇವೆ ಒದಗಿಸುತ್ತಿರುವ ಐಎಲ್‍ಅಂಡ್‍ಎಫ್‍ಎಸ್‍ಎಲ್ ಮತ್ತು ಅಮೆರಿಕಾ ಮೂಲದ ಇ ಅಂಡ್ ವೈ ಕಂಪನಿಗಳಿಂದ ಕಲಬುರಗಿ ಅಭಿವೃದ್ಧಿ ಸಲುವಾಗಿ ಸೇವೆ ಪಡೆಯುವ ನಿಟ್ಟಿನಲ್ಲಿ ಅಲೋಚಿಸಲಾಗಿದೆ ಎಂದು ಅವರು ಹೇಳಿದರು.
ಕಲಬುರಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಸರಿಸಬೇಕಿದೆ. ಕಲ್ಯಾಣ ಕರ್ನಾಟಕ ಎಂಬ ಹೆಸರು ಕೇವಲ ನಾಮಕರಣ ಎಂಬುದಕ್ಕೆ ಸೀಮಿತವಾಗದೆ, ಅಭಿವೃದ್ಧಿಯ ವಸ್ತುಸ್ಥಿತಿಯಾಗಬೇಕು ಎಂದು ಅವರು ಪ್ರತಿಪಾದಿಸಿದರು. ತಮ್ಮ ಸ್ವಕ್ಚೇತ್ರ ಬಾಗಲಕೋಟೆಯ ಬೀಳಗಿಯಲ್ಲಿ ಶಿಕ್ಷಣ ಅಭಿವೃದ್ಧಿಯಲ್ಲಿ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸಿದ ಅವರು, “ಕಲಬುರಗಿ ವಿಜನ್-2050”ಯಲ್ಲಿ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಏಳ್ಗೆ ಸಾಧಿಸಬಹುದಾಗಿದೆ ಎಂದು ಒತ್ತಿ ಹೇಳಿದರು.
ನೀರಿನ ವ್ಯವಸ್ಥೆ, ಲೈಮ್ ಸ್ಟೋನ್ ಗಳಿಂದ ಕಲಬುರಗಿ ಜಿಲ್ಲೆ ಶ್ರೀಮಂತವಾಗಿದೆ. ಆದರೆ, ಉದ್ದಿಮೆಗಳಿಗೆ ಇವುಗಳನ್ನು ಬಳಸಿಕೊಂಡು ಕರ್ನಾಟಕದ ಹೊರಗಿನವರು ಇಲ್ಲಿ ಅಭಿವೃದ್ಧಿಯಾಗುತ್ತಿದ್ದಾರೆ. ಜಿಲ್ಲೆಯ ಎಂಬಿಎ, ಎಂಟೆಕ್, ಪಿಎಚ್‍ಡಿ ಪದವೀಧರರಿಗೆ ಸಣ್ಣ-ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿಕೊಟ್ಟರೆ, ಮುಂದಿನ ದಿನ 10-20 ವರ್ಷಗಳಲ್ಲಿ ನೂರಾರು ಜನರಿಗೆ ಉದ್ಯೋಗ ನೀಡುವ ಉದ್ಯೋಗದಾತರಾಗಲಿದ್ದಾರೆ ಎಂದು ಹೇಳಿದರು.