– ಸಿಲಿಕಾನ್ ಸಿಟಿಯಲ್ಲೂ ತಂಪೆರೆದ ಮಳೆ
– ಕಲಬುರಗಿಯಲ್ಲಿ ಬೆಳೆ ಹಾನಿ
– ಬೀದರ್ ರೈತರ ಮೊಗದಲ್ಲಿ ಸಂತಸ
ಬೆಂಗಳೂರು: ಉದ್ಯಾನ ನಗರಿ ಸೇರಿದಂತೆ ರಾಜ್ಯದ ಹಲವೆಡೆ ವರುಣನ ಅಬ್ಬರ ಮುಂದುವರಿದಿದ್ದು, ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಸಹ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ನಗರವನ್ನು ತಂಪಾಗಿಸಿದೆ.
ಬೆಂಗಳೂರಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಲಾಕ್‍ಡೌನ್ ಹಿನ್ನೆಲೆ ಅಷ್ಟೇನು ವಾಹನಗಳು ಸಂಚರಿಸದ ಹಿನ್ನೆಲೆ ಟ್ರಾಫಿಕ್ ಸಮಸ್ಯೆ ಉಂಟಾಗಿಲ್ಲ. ಆದರೆ ತುರ್ತು ಸೇವೆಯ ವಾಹನಗಳಿಗೆ ಸ್ವಲ್ಪ ಮಟ್ಟಿಗೆ ಅಡಚಣೆ ಉಂಟಾಗಿದೆ. ಮಳೆಯಿಂದಾಗಿ ನಗರಕ್ಕೆ ತಂಪೆರೆದಂತಾಗಿದ್ದು, ಮಧ್ಯಾಹ್ನದಿಂದ ಬಿಸಿಲಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ವರಣ ತಂಪೆರೆದಿದ್ದಾರೆ. ಆದರೆ ಅಲ್ಲಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಸ್ವಲ ತೊಂದರೆಯುಂಟಾಗಿದೆ.
Advertisement
Advertisement
ಗಡಿ ಜಿಲ್ಲೆ ಬೀದರ್ ನಲ್ಲಿ ಸತತ ಎರಡು ಗಂಟೆಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ವರುಣನ ಅಬ್ಬರಕ್ಕೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತವಾಗಿದೆ. ಬೀದರ್, ಔರಾದ್, ಬಾಲ್ಕಿ ಹಾಗೂ ಹುಮ್ನಬಾದ್ ಸೇರಿದಂತೆ ಜಿಲ್ಲೆಯಾದ್ಯಂತ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಳೆರಾಯನ ಅಬ್ಬರದಿಂದಾಗಿ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಮಳೆ ಪ್ರಾರಂಭವಾದರೂ ಜಿಲ್ಲೆಯಲ್ಲಿ ಮಳೆಯಾಗದ ಕಾರಣ ಬೇಸರದಲ್ಲಿದ್ದ ರೈತರಿಗೆ ಈ ಮಳೆಯಿಂದ ಸಂತಸ ಉಂಟಾಗಿದೆ. ಇದೀಗ ಬಿತ್ತನೆ ಕಡೆ ಮುಖ ಮಾಡಲಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಾಗಲಿದ್ದು, ಮೊತ್ತೊಂದು ಕಡೆ ವರುಣ ಅಬ್ಬರಿಸುತ್ತಿದ್ದಾನೆ.
Advertisement
Advertisement
ಕಲಬುರ್ಗಿ ನಗರ ಮತ್ತು ಜಿಲ್ಲೆಯ ಹಲವೆಡೆ ಮಳೆ ಅಬ್ಬರಿಸಿ ಬೊಬ್ಬಿರಿದಿದ್ದು, ಕೆಲವೊಮ್ಮೆ ಜಿಟಿ ಜಿಟಿ, ಇನ್ನೂ ಕೆಲವೊಮ್ಮೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಳೆ ಬಿರುಸಾಗಿ ಸುರಿದಿದ್ದು, ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊಲಗಳಿಗೂ ನೀರು ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡಿವೆ. ಕಮಲಾಪುರ ತಾಲೂಕಿನ ಓಕಳಿ ಮತ್ತಿತರ ಕಡೆ ಜಮೀನುಗಳಲ್ಲಿ ನೀರು ಹರಿಯುತ್ತಿದೆ.
ಮಳೆ ನೀರಿಗೆ ಗೇಣು ಉದ್ದದ ಪೈರು ಕೊಚ್ಚಿ ಹೋಗಿದ್ದು, ತೊಗರಿ, ಹೆಸರು, ಉದ್ದು, ಎಳ್ಳು ಇತ್ಯಾದಿಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.