ಕಲಬುರಗಿ: ಜಿಲ್ಲಾ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಶಾಂತಿಯುತವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆ ನಿಟ್ಟಿನಲ್ಲಿ ಅಪರಾಧ, ಅನೈತಿಕ ಚಟುವಟಿಕೆ ಸೇರಿ ವಿವಿಧ ಕುಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ. ಎಸ್ ರವಿಕುಮಾರ ಅವರು ತಿಳಿಸಿದರು.
ಶುಕ್ರವಾರ ಇಲ್ಲಿನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪ್ರತಿನಿತ್ಯ ಅನೇಕ ರೀತಿಯ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಅವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸ್ ಅಧಿಕಾರಿಗಳ ಗಸ್ತು ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
Advertisement
ಮನೆ ಕಳವು, ರಾತ್ರಿಯಲ್ಲಿ ಸಂಚರಿಸುವ ವಾಹನಗಳ ತಡೆದು ಹಣ ವಸೂಲಿ, ಕಳತನ ಕೃತ್ಯಗಳನ್ನು ನಿಯಂತ್ರಿಸಲು ಓರ್ವ ಎಸಿಪಿ ಹಾಗೂ 3 ಇನ್ಸ್‍ಸ್ಪೆಕ್ಟರ್ ಗಳು ನಗರದಲ್ಲಿ ನೈಟ್ ಪ್ಯಾಟ್ರೋಲಿಂಗ್ ಮಾಡಲಿದ್ದಾರೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಸಹ ಹಗಲು ಹಾಗೂ ರಾತ್ರಿ ವೇಳೆ ಪೊಲೀಸ್ ಅಧಿಕಾರಿಗಳ ಗಸ್ತು ಸಹ ಹೆಚ್ಚಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
Advertisement
Advertisement
ನಗರದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಎಮರ್ಜೆನ್ಸಿ 112 ಸಂಖ್ಯೆಯ 12 ವಾಹನಗಳು ಕಳೆದ ಒಂದು ತಿಂಗಳಿಂದ ಚಾಲ್ತಿಯಲ್ಲಿದ್ದು, ಸುಮಾರು 750 ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಪ್ರಕರಣ ಇತ್ಯರ್ಥ ಮಾಡುವಲ್ಲಿ ಯಶಸ್ವಿಯಾಗಿದೆ. ಗುಂಪು ಜಗಳ, ಮನೆಗಳ್ಳತನ ಮುಂತಾದ ಪ್ರಕರಣಗಳು ಎಂದು ರವಿಕುಮಾರ್ ಅವರು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ಮುಗಿದಿಲ್ಲ ನಾಯಕತ್ವ ಗೊಂದಲ- ರಾತ್ರೋರಾತ್ರಿ ದೆಹಲಿಗೆ ಸಿಪಿವೈ ದೌಡು
Advertisement
ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಅಕ್ರಮವಾಗಿ ಮರಳು ದಂಧೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಕ್ರಮ ಮರುಳುಗಾರಿಕೆಗೆ ಮಾತ್ರ ಜಿಲ್ಲೆಯಲ್ಲಿ ಅನುಮತಿಸಿದೆ. ಇದಲ್ಲದೆ ನಗರದ ಅನೇಕ ಕಡೆ ಅಪಘಾತ ಪ್ರಕರಣಗಳು ಕಂಡು ಬರುತ್ತಿದ್ದು, ಹೊರಗಡೆಯಿಂದ ನಗರ ಪ್ರವೇಶಿಸುವ ರಿಂಗ್ ರಸ್ತೆಗಳಲ್ಲಿ ಹೆಚ್ಚು ಸಂಭವಿಸುತ್ತಿವೆ. ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳಗ್ಗೆ 8 ರಿಂದ ಬೆಳಗ್ಗೆ 10 ಗಂಟೆಯವರೆಗೆ ಹಾಗೂ ಸಾಯಂಕಾಲ 4 ರಿಂದ ರಾತ್ರಿ 8 ಗಂಟೆಯವರೆಗೆ ಸಿಗ್ನಲ್‍ಗಳಲ್ಲಿ ಅತಿವೇಗವಾಗಿ ನಗರ ಪ್ರವೇಶಿಸುವ ವಾಹನಗಳ ನಿಯಂತ್ರಿಸಲು ಟ್ರಾಫಿಕ್ ಪೊಲೀಸರ (ಇಂಟರ್ಸೆಪ್ಟರ್) ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಸಿಸಿಟಿವಿ ಹೆಚ್ಚಳ:
ನಗರದಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಕೇವಲ 1,000 ದಷ್ಟು ಸಿಸಿಟಿವಿಗಳು ಇವೆ. ಇವುಗಳನ್ನು ಹೆಚ್ಚಿಸುವ ಅವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ 5000 ಕ್ಕಿಂತ ಹೆಚ್ಚಿನ ಸಿಸಿಟಿವಿಗಳನ್ನು ನಗರದಲ್ಲಿ ಅಳವಡಿಸಿ, ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದರು.
ಹೊಸದಾಗಿ ರಚನೆಗೊಂಡಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸದ್ಯ ಶೇ. 50 ರಷ್ಟು ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ಅಧಿಕಾರಿಗಳ ನೇಮಕ ಆದಷ್ಟು ಬೇಗ ಪೂರ್ಣಗೊಳ್ಳಲಿದೆ ಎಂದ ಅವರು, ಸದ್ಯ 300 ಮಂದಿ ತರಬೇತಿ ಪಡೆಯುತ್ತಿದ್ದು, ಅವರು ಮರಳಿದ ಬಳಿಕ ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲಾಗುವುದು ಎಂದು ತಿಳಿಸಿದರು.