ಕಲಬುರಗಿಯಿಂದ ಶ್ರಮಿಕ್ ಎಕ್ಸ್‌ಪ್ರೆಸ್ ಮೂಲಕ ಬಿಹಾರಕ್ಕೆ ಹೊರಟ 1,436 ಪ್ರವಾಸಿ ಕಾರ್ಮಿಕರು

Public TV
2 Min Read
GLB a

ಕಲಬುರಗಿ: ಉದ್ಯೋಗ ಆರಿಸಿ ಇಲ್ಲಿಗೆ ಒಂದು ಲಾಕ್‍ಡೌನ್‍ನಿಂದ ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ ಬಿಹಾರಿಗಳು ಬುಧವಾರ ರಾತ್ರಿ 8 ಗಂಟೆಗೆ ಶ್ರಮಿಕ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ತಮ್ಮ ಸ್ವ-ಸ್ಥಳದತ್ತ ಪ್ರಯಾಣ ಬೆಳೆಸಿದರು.

ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಕಳೆದೆರಡು ತಿಂಗಳಿನಿಂದ ದೇಶದಾದ್ಯಂತ ಲಾಕ್‍ಡೌನ್ ಪರಿಣಾಮ ಪ್ರವಾಸಿ ಕಾರ್ಮಿಕರು ಸಿಲುಕಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆ ನೀಡಿ ಆಯಾ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಪ್ರಯಾಣ ಬೆಳಸಲು ಸರ್ಕಾರ ಅವಕಾಶ ನೀಡಿರುವುದರಿಂದ ಬುಧವಾರ ಸಂಜೆ ಕಲಬುರಗಿ ರೈಲ್ವೆ ನಿಲ್ದಾಣದಿಂದ ಬಿಹಾರಕ್ಕೆ ವಲಸಿಗರು ಮುಖ ಮಾಡಿದರು. ತವರಿನತ್ತ ಹೊರಟ ವಲಸಿಗರ ಮುಖದಲ್ಲಿ ಮಂದಹಾಸ ಕಂಡಿತು.

GLB b

ಈ ಸಂದರ್ಭದಲ್ಲಿ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸುಮಾರು 1,436 ಬಿಹಾರದ ನಿವಾಸಿಗಳು ಪ್ರಯಾಣಕ್ಕೆ ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲರು ಇಂದು ತಮ್ಮ ರಾಜ್ಯಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ ಎಂದರು.

ಬಿಹಾರಕ್ಕೆ ಪ್ರಯಾಣ ಬೆಳೆಸಲು ಬೇರೆ ಜಿಲ್ಲೆಯಿಂದ ಬಂದವರನ್ನು ಆಯಾ ಜಿಲ್ಲೆಯಿಂದಲೇ ಸ್ಕ್ರೀನಿಂಗ್ ಮಾಡಿ ತರಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿದ್ದ ಕಾರ್ಮಿಕರಿಗೆ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಮಂಗಳವಾರಷ್ಟೇ ಕಲಬುರಗಿ ರೈಲು ನಿಲ್ದಾಣದಿಂದ ಮೊದಲನೇ ಶ್ರಮಿಕ್ ಎಕ್ಸ್‍ಪ್ರೆಸ್ ರೈಲು ಸುಮಾರು 1,500 ಜನ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಿತ್ತು. ಇಂದು ಕಲಬುರಗಿಯಿಂದ ಬಿಹಾರಕ್ಕೆ ಹೋಗುತ್ತಿರುವ 2ನೇ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಇದಾಗಿದ್ದು, ಶುಕ್ರವಾರ ರೈಲು ಬಿಹಾರ ತಲುಪಲಿದೆ ಎಂದರು.

ಗುರುವಾರ ಮತ್ತೊಂದು ರೈಲು ಬಿಹಾರಕ್ಕೆ: ಬಿಹಾರದ ವಲಸಿಗ ಕಾರ್ಮಿಕರ ಪ್ರಯಾಣಕ್ಕೆ ಕಲಬುರಗಿ ರೈಲ್ವೆ ನಿಲ್ದಾಣದಿಂದ ಗುರುವಾರ ಮತ್ತೊಂದು ಶ್ರಮಿಕ್ ಎಕ್ಸ್ ಪ್ರೆಸ್ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಶರತ್ ಬಿ. ಮಾಹಿತಿ ನೀಡಿದರು. ಡಿ.ಸಿ.ಪಿ ಕಿಶೋರ್ ಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಸ್ಟೇಷನ್ ಮಾಸ್ಟರ್ ಪ್ರಸಾದ ರಾವ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಪ್ರವಾಸಿ ಕಾರ್ಮಿಕರನ್ನು ಬೀಳ್ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *