ಕಲಬುರಗಿ: ಬೇಸಿಗೆ ಕಾಲ ಬಂದ್ರೆ ಸಾಕು ನಾವು ನೀವೆಲ್ಲ ಕೆಂಪ್ಪು ಬಣ್ಣದ ಕಲ್ಲಂಗಡಿಯ ಮೊರೆ ಹೋಗುತ್ತೇವೆ. ಆದರೆ ಕಲಬುರಗಿಯ ಓರ್ವ ಯುವಕ ವಿದೇಶಿ ತಳಿಯ ಹಳದಿ ಕಲ್ಲಂಗಡಿ ಬೆಳೆದು ಸೈ ಎನ್ನಿಸಿಕೊಂಡಿದ್ದಾನೆ.
ಹೌದು. ಬೇಸಿಗೆ ಕಾವು ಹೆಚ್ಚಾಗ್ತಿದೆ. ಬೆಳಗ್ಗಿನಿಂದಲೇ ಸೂರ್ಯ ಶಿಕಾರಿ ಶುರುವಾಗುತ್ತೆ. ಬೇಸಿಗೆಯಲ್ಲಿ ದಾಹ ನೀಗಿಸೋದ್ರಲ್ಲಿ ಕಲ್ಲಂಗಡಿ ಹಣ್ಣಿಗೆ ಮೊದಲ ಸ್ಥಾನ. ಕಲ್ಲಂಗಡಿ ಅಂದ್ರೆ ಹಸಿರು- ಕೆಂಪು ಇರತ್ತೆ. ಆದರೆ ಹಳದಿ ಬಣ್ಣದ ಕಲ್ಲಂಗಡಿ ಅಂದ್ರೆ ನಂಬಲೇಬೇಕು. ಕಲಬುರಗಿಯ ಯುವಕ ಬೆಳೆದಿರೋ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಫುಲ್ ಫೇಮಸ್ ಆಗಿದೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ನಿವಾಸಿ ಬಸವರಾಜ್ ಪಾಟೀಲ್ ಬಿ.ಕಾಂ ಪದವೀಧರ. ಆದರೂ ಕೃಷಿಯಲ್ಲಿ ಹೆಚ್ಚು ಉತ್ಸಾಹ ಇರೋದ್ರಿಂದ 2 ಎಕರೆ ಪ್ರದೇಶದಲ್ಲಿ ಮಲೇಷಿಯಾದಲ್ಲಿ ಬೆಳೆಯುವ ಹಳದಿ ಕಲ್ಲಂಗಡಿ ತಳಿಯ ಹಣ್ಣನ್ನು ಬೆಳೆದಿದ್ದಾರೆ. ಇದಕ್ಕೀಗ ಮಾರ್ಕೆಟ್‍ನಲ್ಲಿ ಈ ಹಣ್ಣಿಗೆ ಫುಲ್ ಡಿಮ್ಯಾಂಡ್ ಬಂದಿದೆ.
ಹಳದಿ ಕಲ್ಲಂಗಡಿ ಹಣ್ಣು ತುಂಬಾ ರುಚಿಕರವಾಗಿದೆ. ಹೆಚ್ಚು ಇಳುವರಿ ಸಹ ಬರುತ್ತದೆ. ಕೆಂಪು ಕಲ್ಲಂಗಡಿ ಹೋಲ್‍ಸೆಲ್ ಪ್ರತಿ ಕೆ.ಜಿಗೆ 6 ರಿಂದ 8 ರೂಪಾಯಿವರೆಗೆ ಮಾರಾಟವಾದ್ರೆ, ಮಲೇಷಿಯಾ ತಳಿಯ ಈ ಹಳದಿ ಕಲ್ಲಂಗಡಿ ಕೆಜಿಗೇ 15 ರೂಪಾಯಿಗೆ ಮಾರಾಟವಾಗುತ್ತಿದೆ.
ಸದ್ಯ ಕಲಬುರಗಿಯ ಈ ವಾಟರ್‍ಮೆಲನ್ ಹೈದಾರಾಬಾದ್, ಮುಂಬೈಯ ಮಾಲ್‍ಗಳಿಗೆ ಮಾರಾಟವಾಗುತ್ತಿದೆ. ಕೃಷಿಯಲ್ಲಿಯೇ ಮನಸ್ಸು ಮಾಡಿದ್ರೆ ಲಕ್ಷಾಂತರ ರೂಪಾಯಿ ಹೇಗೆ ಸಂಪಾದಿಸಬಹುದು ಎಂಬುದನ್ನ ಬಸವರಾಜ್ ತೋರಿಸಿಕೊಟ್ಟಿದ್ದಾರೆ.