– ಮಂಡ್ಯ ಚುನಾವಣೆಯೇ ಬೇರೆ, ಉಪಚುನಾವಣೆಯೇ ಬೇರೆ
ತುಮಕೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳಲ್ಲಿ ಸ್ಟಾರ್ ಕ್ಯಾಂಪೇನ್ ಮಾಡುವುದು ಹೆಚ್ಚಾಗುತ್ತಿದೆ. ಆದರೆ ಸ್ಟಾರ್ ಕ್ಯಾಂಪೇನ್‍ನಿಂದ ಚುನಾವಣೆಯಲ್ಲಿ ಗೆಲುವು ಪಡೆಯಲು ಆಗೋದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಆರ್.ಆರ್ ನಗರ ಮತ್ತು ಶಿರಾ ಉಪಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್‍ಡಿಕೆ, ಕರ್ನಾಟಕದಲ್ಲಿ ಸ್ಟಾರ್ ಕ್ಯಾಂಪೇನ್‍ಗಳ ಪ್ರಚಾರದಿಂದ ಚುನಾವಣೆ ಗೆಲ್ಲಲು ಆಗಲ್ಲ. ಮಂಡ್ಯ ಚುನಾವಣೆ ಬೇರೆ, ಈ ಉಪ ಚುನಾವಣೆಯೇ ಬೇರೆ. ಕೆಲವರು ಮಂಡ್ಯ ಲೋಕಸಭಾ ಚುನಾವಣೆಯನ್ನು ಆರ್.ಆರ್ ನಗರಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಲೋಕಸಭೆ ಅಭ್ಯರ್ಥಿ ಪರ ಕಾಂಗ್ರೆಸ್ ಬಿಜೆಪಿ, ರೈತ ಸಂಘ ಒಟ್ಟಾಗಿ ಕೆಲಸ ಮಾಡಿದ್ದರು. ಅಲ್ಲದೇ ಮಂಡ್ಯ ಪಕ್ಷೇತರ ಅಭ್ಯರ್ಥಿ ಪರ ಮಾಧ್ಯಮಗಳು ಕೂಡ ಅನುಕಂಪ ತೋರಿದ ಹಿನ್ನೆಲೆಯಲ್ಲಿ ಗೆಲುವು ಪಡೆದರು. ಸ್ಟಾರ್ ಕ್ಯಾಂಪೇನ್ ನಿಂದ ಯಾರು ಗೆದ್ದಿಲ್ಲ. ಸ್ಟಾರ್ ಗಳು ಜನರ ಬಳಿ ಮತ ಕೇಳುತ್ತಾರೆ, ಆ ಬಳಿಕ ಹೋಗುತ್ತಾರೆ. ಆ ಬಳಿಕ ಜನರ ಕಷ್ಟ ಸುಖ ಕೇಳಲು ಬರಲ್ಲ ಎಂದರು.
ಶಿರಾಗೆ ನೀರು ಕೊಡುವ ವಿಚಾರವಾಗಿ ಸಿಎಂ ಭರವಸೆ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆಗ ನೀರು ಕೊಡದವರು ಈಗ ಕೊಡುತ್ತಾರಾ? ಬೇರೆ ಬೇರೆ ಜಿಲ್ಲೆಗಳಿಂದ ಕೇಸರಿ ಟವೆಲ್ ಹಾಕಿಕೊಡವರನ್ನು ಶಿರಾಗೆ ಕರೆತಂದಿದ್ದಾರೆ. ನೀರು ಕೊಟ್ಟು ಜನರ ವಿಶ್ವಾಸಗಳಿಸೋದಾದರೆ ಸಂಜೆ 7 ಗಂಟೆ ಬಳಿಕ ಕೆಸರಿ ಯುವಕರಿಂದ ಗಲ್ಲಿ ಗಲ್ಲಿ ಸುತ್ತಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಸಮ್ಮಿಶ್ರ ಸರ್ಕಾರ ಬಂದು ಹೊಸ ಸರ್ಕಾರ ಬಂದಿದೆ. ಮುಗಿದ ಅಧ್ಯಾಯ ಮಾತನಾಡೋದು ಬೇಡ. ಜನತೆಯ ಪರಿಸ್ಥಿತಿ ಎಲ್ಲಿಗೆ ತಂದಿದ್ದಾರೆ ಎಂದು ಜನರೆ ಹೇಳುತ್ತಾರೆ. ಮೈತ್ರಿ ಸರ್ಕಾರ ಬೀಳಲು ಯಾರು ಕಾರಣ ಅಂತ ಚರ್ಚಿಸುವ ಸಮಯವಲ್ಲ. ಅಶೋಕ್ ಅವರಿಗೂ ಶಿರಾ ಕ್ಷೇತ್ರಕ್ಕೂ ಸಂಬಂಧವೇನು? ಶಿರಾದಲ್ಲಿ ಎಷ್ಟು ಹಳ್ಳಿ ಇದೆ, ಅವರ ಕಷ್ಟ ಏನು, ಪರಿಸ್ಥಿತಿ ಹೇಗಿದೆ ಅಂತಾ ಅವರಿಗೆ ತಿಳಿದಿದೆಯಾ? ಎಲ್ಲೋ ಬೆಂಗಳೂರಲ್ಲಿ ಕುಳಿತು ಶಿರಾದಲ್ಲಿ ಜನರು ಜೆಡಿಎಸ್ ಗೆಲ್ಲಲ್ಲ ಅಂತಾರೆ. ಆದರೆ ಆಸೆ ಆಮಿಷಗಳಿಗೆ ಶಿರಾ ಜನರು ಬಲಿಯಾಗಿಲ್ಲ. ಸಮ್ಮಿಶ್ರ ಸರ್ಕಾರ ತೆಗೆದು ಸರ್ಕಾರ ರಚನೆ ಮಾಡಿರುವವರಿಗೆ ಈಗಲಾದರೂ ಕೆಲಸ ಮಾಡಿ ಎಂದು ಜನರು ಬುದ್ಧಿ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.